ರಾಯಚೂರು: ದೇಶಾದ್ಯಂತ ಈಗ ವಿಘ್ನನಿವಾರಕ ಗಣೇಶನದ್ದೇ ಹವಾ, ಎಲ್ಲಿ ನೋಡಿದ್ರೂ ಗಣೇಶನ ಪ್ರತಿಷ್ಠಾಪನೆ, ವಿಸರ್ಜನೆಯದ್ದೇ ಸಂಭ್ರಮ. ಆದರೆ ವರುಣನ ಕೋಪಕ್ಕೆ ತುಂಬಿ ಹರಿದ ಕೃಷ್ಣೆಯ ಪ್ರವಾಹದಿಂದ ಸಂತ್ರಸ್ತರಾದ ನೆರೆಪೀಡಿತ ಜನ ಗಣೇಶ ಹಬ್ಬವನ್ನು ಆಚರಿಸುವ ಸ್ಥಿತಿಯಲ್ಲಿಲ್ಲ. ರಾಯಚೂರಿನ ಗುರ್ಜಾಪುರ ಗ್ರಾಮಸ್ಥರು ಮನೆಮಠ ಕಳೆದುಕೊಂಡು ಹಬ್ಬಹುಣ್ಣಿಮೆಗಳನ್ನೇ ಮರೆತಿದ್ದಾರೆ.
ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿರುವ ರಾಯಚೂರಿನ ಗುರ್ಜಾಪುರ ಗ್ರಾಮದಲ್ಲಿ ಈ ವರ್ಷ ಗಣೇಶ ಹಬ್ಬವನ್ನೇ ಆಚರಿಸುತ್ತಿಲ್ಲ. ಕಳೆದ 25 ವರ್ಷಗಳಿಂದ ವಿಜೃಂಭಣೆಯಿಂದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದ ಗ್ರಾಮದ ಜನ ಈಗ ಮನೆಯಲ್ಲೂ ಹಬ್ಬ ಆಚರಿಸುವ ಸ್ಥಿತಿಯಲ್ಲಿಲ್ಲ. ಕೃಷ್ಣಾ ನದಿ ತುಂಬಿ ಹರಿದು ಜಮೀನುಗಳು ಹಾಗೂ ಬೆಳೆ ಹಾಳಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಬರಗಾಲ. ಮಳೆಯಿಲ್ಲದೆ ಬೆಳೆಯಿಲ್ಲ ಎನ್ನುವ ಕೊರಗಿನ ಮಧ್ಯೆ ಹಾಗೋ ಹೀಗೋ ಬೆಳೆದು ನಿಂತ ಬೆಳೆಯೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ವಸ್ತುಗಳೆಲ್ಲಾ ಕೃಷ್ಣೆ ಪಾಲಾಗಿವೆ. ದಾನಿಗಳು ಕೊಟ್ಟ ದವಸಧಾನ್ಯ, ವಸ್ತುಗಳಲ್ಲೇ ಎಷ್ಟೋ ಜನ ಬದುಕುತ್ತಿದ್ದಾರೆ. ಹೀಗಾಗಿ ಈ ವರ್ಷ ಗಣೇಶ ಹಬ್ಬದಿಂದ ಗ್ರಾಮಸ್ಥರು ದೂರ ಉಳಿದಿದ್ದಾರೆ.
Advertisement
Advertisement
ಪ್ರವಾಹದಿಂದಾಗಿ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ಈಗಲೂ ಜನ ಮನೆಯಲ್ಲಿ ತುಂಬಿದ ಕೆಸರನ್ನು ತೆಗೆಯುತ್ತಲೇ ಇದ್ದಾರೆ. ಮನೆ ಕಳೆದುಕೊಂಡು ನಿರಾಶ್ರಿತರಾದವರು ಇದ್ದಾರೆ. ಮನೆ ಸ್ವಚ್ಛ ಮಾಡಿಕೊಳ್ಳುವುದು ಸೇರಿ ಸಂತ್ರಸ್ತರಿಗೆ ಸರ್ಕಾರ 10 ಸಾವಿರ ರೂ. ನೀಡುತ್ತಿದೆ. ಆದರೆ ಸಂತ್ರಸ್ತರು ಪುನಃ ಬದುಕು ಕಟ್ಟಿಕೊಳ್ಳಲು ಈ ಅಲ್ಪ ಸಹಾಯ ಸಾಕಾಗುವುದಿಲ್ಲ. ಹೀಗಾಗಿ ಗ್ರಾಮವನ್ನು ಸ್ಥಳಾಂತರ ಮಾಡಿ ಹೊಸ ಬದುಕು ನೀಡಲು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಕಷ್ಟಗಳ ಮಧ್ಯೆ ಗಣೇಶ ಹಬ್ಬವನ್ನೇ ಮರೆತುಹೋಗಿದ್ದಾರೆ.