Districts

ಕ್ರಿಮಿನಾಶಕ ಸಿಂಪಡನೆಗೆ ಸಿದ್ಧಗೊಂಡ ಡ್ರೋನ್- ರಾಯಚೂರು ಕೃಷಿ ವಿವಿ ವಿದ್ಯಾರ್ಥಿ ಸಾಧನೆ

Published

on

Share this

-ಜಿಪಿಎಸ್ ಮೂಲಕ ಕುಳಿತಲ್ಲೆ ಕ್ರಿಮಿನಾಶಕ ಸಿಂಪಡನೆ

ರಾಯಚೂರು: ಹೊಲ, ಗದ್ದೆಗಳಲ್ಲಿ ಕೆಲಸ ಮಾಡಲು ಕೂಲಿಯಾಳುಗಳನ್ನ ಹುಡುಕುವುದರಲ್ಲೇ ರೈತರು ಸುಸ್ತಾಗಿ ಹೋಗುತ್ತಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲವಾಗಲಿ ಅಂತ ರಾಯಚೂರು ಕೃಷಿ ವಿವಿಯ ವಿದ್ಯಾರ್ಥಿ ರೈತ ಸ್ನೇಹಿ ಯಂತ್ರವನ್ನ ಅಭಿವೃದ್ಧಿಪಡಿಸಿದ್ದಾರೆ. ಕಡಿಮೆ ಸಮಯ, ಕಡಿಮೆ ಜನ ಹಾಗೂ ಆರೋಗ್ಯಕರ ಬೇಸಾಯಕ್ಕಾಗಿ ಡ್ರೋನ್ ಮೊರೆಹೋಗಿದ್ದಾರೆ.

ಡ್ರೋನ್ ಅಂದ್ರೆ ಥಟ್ಟನೆ ನೆನಪಾಗೋದು ದೊಡ್ಡ ದೊಡ್ಡ ಸಭೆ, ಸಮಾರಂಭಗಳಲ್ಲಿ ದೃಶ್ಯಗಳನ್ನ ಚಿತ್ರಿಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿ ಅಷ್ಟೇ. ಆದ್ರೆ ರಾಯಚೂರಿನ ಕೃಷಿ ವಿವಿಯ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಯಲ್ಲಪ್ಪ ಈಗ ಡ್ರೋನನ್ನು ಕ್ರಿಮಿನಾಶಕ ಸಿಂಪಡಿಸುವ ಯಂತ್ರವನ್ನಾಗಿಸಿದ್ದಾರೆ. ಹಳೆಯ ಪದ್ಧತಿಗಳಲ್ಲೇ ಹೊಲ ಗದ್ದೆಗಳಲ್ಲಿ ಬೇಸಾಯ ಮಾಡಲು ಕಷ್ಟಪಡುತ್ತಿದ್ದ ತಂದೆ ಹಾಗೂ ಸಹೋದರರಿಗೆ ಸ್ಪಂದಿಸಲು ಕೃಷಿ ಎಂಜಿನೀಯರಿಂಗ್‍ಗೆ ಸೇರಿದ ಯಲಪ್ಪ ಇಂತಹದ್ದೊಂದು ಸಾಧನೆ ಮಾಡಿದ್ದಾರೆ.

ಎಂ.ಟೆಕ್ ಅಂತಿಮ ವರ್ಷದ ಪ್ರಾಜೆಕ್ಟ್‍ಗಾಗಿ ಡ್ರೋನ್ ಆಪರೇಟೆಡ್ ಅಗ್ರಿಕಲ್ಚರ್ ಸ್ಪ್ರೇಯರ್ ಅಭಿವೃದ್ದಿಪಡಿಸಿದ್ದಾರೆ. ಕಾಲೇಜು ಅನುದಾನದಲ್ಲೇ ಎರಡು ಲಕ್ಷ ರೂಪಾಯಿಯಲ್ಲಿ ತಯಾರಿಸಿರುವ ಈ ಸಾಧನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಹೊಲದ ಬದುವಿನಲ್ಲೇ ಕುಳಿತು ರಿಮೋಟ್ ಕಂಟ್ರೋಲ್ ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿಯಾಳು ಸಮಸ್ಯೆಯಿಲ್ಲ, ಕ್ರಿಮಿನಾಶಕದ ಸೈಡ್ ಎಫೆಕ್ಟ್ ಸಹ ಇಲ್ಲ.

ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿದಂತೆ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಡ್ರೋನ್ ಗೆ 5 ಲೀಟರ್ ಟ್ಯಾಂಕ್ ಅಳವಡಿಸಲಾಗಿದ್ದು ಕ್ರಿಮಿನಾಶಕ ಮಿಶ್ರಣ ಬೆರಿಸಿ ಜಿಪಿಎಸ್ ಮೂಲಕ ಕೆಲಸ ನಿಗದಿ ಮಾಡಿದ್ರೆ ಸಾಕು ಕೆಲಸ ಮುಗಿದಂತೆ.

ಗದ್ದೆಯಲ್ಲಿ ನೀರು ನಿಂತಾಗ ರೈತರು ಹೊಲದಲ್ಲಿ ಓಡಾಡಿ ಕ್ರಿಮಿನಾಶಕ ಸಿಂಪಡಿಸುವುದು ಕಷ್ಟದ ಕೆಲಸ. ಆದ್ರೆ ವಿದ್ಯಾರ್ಥಿ ಯಲ್ಲಪ್ಪ ತಯಾರಿಸಿರೋ ಈ ಡ್ರೋನ್‍ನಿಂದ ಗದ್ದೆ ಬದುವಿನ ಮೇಲೆ ಕುಳಿತು ಕೆಲಸ ಮಾಡಬಹುದು. ರೈತನ ಮಗನಾಗಿ ರೈತರ ಅನುಕೂಲಕ್ಕೆ ಯಲ್ಲಪ್ಪ ಅಭಿವೃದ್ದಿಪಡಿಸಿರುವ ಡ್ರೋನ್ ಕ್ರಿಮಿನಾಶಕ ಸಿಂಪಡಿಸುವ ಯಂತ್ರ ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದಿದೆ. ಆದ್ರೆ ರೈತರಿಗೆ ಮುಕ್ತವಾಗಿ ಸಿಗಬೇಕಿದೆ ಅಷ್ಟೆ.

Click to comment

Leave a Reply

Your email address will not be published. Required fields are marked *

Advertisement
Advertisement