ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆ 108 ಆರೋಗ್ಯ ಕವಚ ವಾಹನದಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ.
ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಮಾನಸಮ್ಮ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಪದ್ದಮ್ಮ ಅವರಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ವಿಶೇಷವೆಂದರೆ ಗರ್ಭಿಣಿಯರಿಬ್ಬರೂ ಸಹ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ಇಬ್ಬರನ್ನೂ ಪ್ರತ್ಯೇಕವಾಗಿ 108ರಲ್ಲಿ ರಾಯಚೂರಿನ ರಿಮ್ಸ್‌ಗೆ ಕರೆತರುವಾಗ ಹೆರಿಗೆಯಾಗಿವೆ. 108 ಆರೋಗ್ಯ ಕವಚ ವಾಹನದ ಸಿಬ್ಬಂದಿ ಇಬ್ಬರಿಗೂ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಂದಿರು ರಾಯಚೂರಿನ ರಿಮ್ಸ್‌ಗೆ ದಾಖಲಾಗಿದ್ದಾರೆ. ಶಿಶುಗಳು ಹಾಗೂ ಬಾಣಂತಿಯರು ಆರೋಗ್ಯದಿಂದಿದ್ದಾರೆ.
108 ವಾಹನದಲ್ಲಿ ಹೆರಿಗೆಯಾಗುವುದು ಜಿಲ್ಲೆಯಲ್ಲಿ ಹೊಸದೇನಲ್ಲವಾದರೂ ಒಂದೇ ದಿನ ಎರಡು ಕಡೆಗಳಲ್ಲಿ ಹೆರಿಗೆಯಾಗಿರುವುದು ವಿಶೇಷವಾಗಿದೆ. ಹಾಳಾದ ರಸ್ತೆಗಳಿಂದಾಗಿ ಗರ್ಭಿಣಿಯರು ಆಸ್ಪತ್ರೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಹ ಇದೆ. ಆದರೆ ಈ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.