ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳನ್ನು ಮುಚ್ಚಬಾರದು. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಮುಚ್ಚಿದರೆ ಆ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕೊರೊನಾ ನಿಯಂತ್ರಣ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಎಚ್ಚರಿಕೆ ವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಂದ್ ಆಗಿರುವ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದು ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಶ್ರೀರಾಮುಲು ಸೂಚಿಸಿದ್ದಾರೆ.
Advertisement
Advertisement
ಈ ಕುರಿತು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಕೂಡಲೇ ಸೂಚನೆ ನೀಡಲು ಸಚಿವ ಶ್ರೀರಾಮುಲು ಆದೇಶ ಮಾಡಿದ್ದಾರೆ. ಈ ಮೊದಲೇ ಮಾಹಿತಿ ನೀಡಿ ಎಚ್ಚರಿಸಿದ್ದರೂ ಆಸ್ಪತ್ರೆ ಅಥವಾ ಕ್ಲಿನಿಕ್ ಸ್ಥಗಿತಗೊಳಿಸಿದ್ದರೆ ಯಾವ ಮುಲಾಜಿಲ್ಲದೆ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಿಮಿನಲ್ ಕೇಸ್ ಸಹ ಹಾಕಲಾಗುತ್ತದೆ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.