ರಾಯಚೂರು: ಜಿಲ್ಲೆಯ ರಾಯಚೂರು ಗ್ರಾಮೀಣ ಕ್ಷೇತ್ರ (Raichur Rural Constituency) ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು ಹಲವಾರು ವಿಶೇಷತೆಗಳನ್ನು ಹೊಂದಿದೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಲ್ಮಲಾ ಕ್ಷೇತ್ರ ರಾಯಚೂರು ಗ್ರಾಮೀಣ ಕ್ಷೇತ್ರವಾಗಿ ಮರುನಾಮಕರಣವಾಯಿತು. ಮರು ವಿಂಗಡಣೆಗೂ ಮುನ್ನ ಕಲ್ಮಲಾ ಕ್ಷೇತ್ರದಲ್ಲಿ ಗೆದ್ದ ಬಹುತೇಕರು ಮಂತ್ರಿಗಳಾಗಿ ಮೆರೆದದ್ದು ಈ ಕ್ಷೇತ್ರದ ವಿಶೇಷತೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ಎದುರಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಮಧ್ಯೆ ನೇರ ಹಣಾಹಣಿ ಇದೆ. ಜೆಡಿಎಸ್ ಪಕ್ಷ ಸಹ ಪೈಪೋಟಿಯಲ್ಲಿದೆ. ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Advertisement
Advertisement
ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಬಸನಗೌಡ ದದ್ದಲ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಜೆಡಿಎಸ್‌ನಿಂದ ಸಣ್ಣ ನರಸಿಂಹ ನಾಯಕ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 2ನೇ ಬಾರಿಗೆ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಸತವಾಗಿ 2 ಬಾರಿ ಗೆಲ್ಲುವುದು ಸುಲಭವಲ್ಲ ಎನ್ನೋದನ್ನು ಸುಳ್ಳು ಮಾಡಲು ಹೊರಟಿದ್ದಾರೆ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತೊಮ್ಮೆ ಮತದಾರರ ವಿಶ್ವಾಸ ಸಾಧಿಸಲು ಹರಸಾಹಸ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
Advertisement
ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್:
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಜನರ ಒಲವು ಇನ್ನೂ ಕಾಂಗ್ರೆಸ್ ಕಡೆ ಕಾಣುತ್ತಿದೆ. ಕ್ಷೇತ್ರದ ಜನರ ಜೊತೆ ಸದಾ ಸಂಪರ್ಕದಲ್ಲಿರುವುದು, ಹೆಚ್ಚು ಆಶ್ವಾಸನೆಗಳನ್ನು ಕೊಡದೆ, ಕ್ಷೇತ್ರದ ಜನರ ನಂಬಿಕೆಯನ್ನು ಉಳಿಸಿಕೊಂಡಿರುವುದು ಬಸನಗೌಡ ದದ್ದಲ್‌ಗೆ ಪ್ಲಸ್ ಆಗಲಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಒಳರಾಜಕೀಯ, ಪರಿಶಿಷ್ಟ ಪಂಗಡ ಸಮುದಾಯ ಮುಖಂಡರಾಗಿದ್ದ ಮಾಜಿ ಸಂಸದ ಬಿವಿ ನಾಯಕ್ ಬಿಜೆಪಿ ಸೇರ್ಪಡೆಯಾಗಿದ್ದು ಸ್ವಲ್ಪ ಹಿನ್ನಡೆ ಉಂಟು ಮಾಡಬಹುದು.
Advertisement
ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಕ್ಷೇತ್ರದ ತುಂಬಾ ಓಡಾಟ ನಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು, ನೆರೆ ಸಂದರ್ಭದಲ್ಲಿ ಬಿಎಸ್‌ವೈ ಅಭಿವೃದ್ಧಿ ಕೆಲಸಗಳು ಅಭ್ಯರ್ಥಿಗೆ ಪ್ಲಸ್ ಆಗಬಹುದು. ಶಾಸಕರಾಗಿದ್ದಾಗ ನೀಡಿದ ಭರಪೂರ ಭರವಸೆಗಳು ಭರವಸೆಗಳಾಗೇ ಉಳಿದಿರುವುದು, ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಜನರಿಂದ ದೂರ ಉಳಿದದ್ದು ಮೈನಸ್ ಆಗಬಹುದು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ – ಈ ಬಾರಿ ಯಾರ ಕೈ ಹಿಡಿಯಲಿದ್ದಾನೆ ಮತದಾರ?
ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಇರುವುದು ಪ್ಲಸ್ ಆಗಬಹುದು. ಆದರೆ ಕ್ಷೇತ್ರದ ಎಲ್ಲಾ ಭಾಗಗಳ ಜನರೊಂದಿಗೆ ಉತ್ತಮ ಒಡನಾಟ ಇಲ್ಲದಿರುವುದು ಅಭ್ಯರ್ಥಿಗೆ ಮೈನಸ್ ಆಗಬಹುದು.
ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗುವ ವಿಷಯಗಳು:
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ, ಕೃಷ್ಣಾ ನದಿ ನಡುಗಡ್ಡೆ ಗ್ರಾಮಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಕ್ಷೇತ್ರದ ಬಹುತೇಕ ಗ್ರಾಮಗಳು ಕೃಷ್ಣಾ ನದಿ ದಂಡೆಯಲ್ಲಿ ಬರುವುದರಿಂದ ಪ್ರವಾಹ ಭೀತಿ, ಗ್ರಾಮ ಸ್ಥಳಾಂತರ ವಿಷಯಗಳು ಚರ್ಚೆಯಾಗುತ್ತವೆ.
2023ರ ಚುನಾವಣೆಗೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,27,761 ಇದೆ. ಇದರಲ್ಲಿ ಪುರುಷರು 1,12,041, ಮಹಿಳೆಯರು 1,15,665 ಹಾಗೂ 55 ತೃತೀಯ ಲಿಂಗಿ ಮತದಾರರಿದ್ದಾರೆ. ಜಾತಿವಾರು ಅಂದಾಜು ಮತದಾರರ ಸಂಖ್ಯೆ ಈ ರೀತಿ ಇದೆ.
ಪರಿಶಿಷ್ಟ ಜಾತಿ – 45,000
ಪರಿಶಿಷ್ಟ ಪಂಗಡ – 30,000
ಗಂಗಾಮತಸ್ಥರು – 28,000
ಕುರುಬರು – 35,000
ಲಿಂಗಾಯತ – 25,000
ಮುಸ್ಲಿಂ – 20,000 ಹಾಗೂ ಇತರೆ ಜಾತಿಯ ಉಳಿದ ಮತದಾರರಿದ್ದಾರೆ.
ಇದುವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 8 ಬಾರಿ, ಜನತಾದಳ, ಜೆಡಿಎಸ್, ಜೆಎಸ್‌ಪಿ, ಬಿಜೆಪಿ, ಪಕ್ಷೇತರ ತಲಾ 1 ಬಾರಿ ಗೆದ್ದಿವೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಪೈಪೋಟಿಯಿದ್ದು ಜೆಡಿಎಸ್ ಅಭ್ಯರ್ಥಿ ಸಹ ಗೆಲುವಿಗಾಗಿ ಸೆಣೆಸಾಟ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?