ರಾಯಚೂರು: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಮಾನ್ವಿ ತಾಲೂಕಿನ ಮುಷ್ಟೂರು ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದ ಸುಮಾರು 6 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮುಷ್ಠೂರು, ಜಾಗೀರ್ ಪನ್ನೂರು, ಯಡಿಯಾಳ್, ದೇವಿಪುರ, ಚೀಕಲಪರ್ವಿ ಸೇರಿದಂತೆ 6 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಸಂಪರ್ಕ ಕಡಿತದಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮಾನ್ವಿ ಪಟ್ಟಣಕ್ಕೆ ಬರಲು 40 ಕಿ.ಮೀ ಹೆಚ್ಚುವರಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
Advertisement
Advertisement
ಮುಳುಗಡೆಯಾದ ಸೇತುವೆ ಮಾರ್ಗ ಕೇವಲ 4 ಕಿ.ಮೀ ನಲ್ಲಿ ಮಾನ್ವಿಗೆ ಸಂಪರ್ಕ ಕಲ್ಪಿಸುತ್ತಿತ್ತು. ನಾಲ್ಕು ಅಡಿಯಷ್ಟು ಎತ್ತರದಲ್ಲಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದರಿಂದ ಕೆಲವು ಕಡೆ ರಸ್ತೆ ಕಿತ್ತು ಹೋಗಿದೆ. ನೂತನ ಸೇತುವೆ ಕಾರ್ಯ ಅರ್ಧಕ್ಕೆ ನಿಂತಿರುವುದರಿಂದ ಹಳ್ಳ ಬಂದಾಗಲೆಲ್ಲಾ ರಸ್ತೆ ಕಡಿತಗೊಳ್ಳುತ್ತಿದೆ. 2009ರಲ್ಲಿ ಉಂಟಾದ ಪ್ರವಾಹದಲ್ಲಿ ಸೇತುವೆ ಕೊಚ್ಚಿ ಹೋಗಿತ್ತು. 2011 ರಲ್ಲಿ ಆರಂಭಗೊಂಡಿದ್ದ ಸೇತುವೆ ಕಾರ್ಯ ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಹಿನ್ನೆಲೆ ಹಳ್ಳ ತುಂಬಿದ್ದರಿಂದ ಕೆಳಮಟ್ಟದ ಸೇತುವೆ ಮುಳುಗಡೆಯಾಗಿದೆ.