ರಾಯಚೂರು: ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಏನೋ ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಈ ಶಾಲೆಯ ಮಕ್ಕಳು ಮಾತ್ರ ಕಟ್ಟಡವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.
ಸಿಂಧನೂರು ತಾಲೂಕಿನ ಗಣೇಶ ನಗರ ಗ್ರಾಮದ ಪ್ರಾಥಮಿಕ ಶಾಲೆಗೆ ಕಟ್ಟಡವೇ ಇಲ್ಲದೆ ಕಳೆದ 12 ವರ್ಷಗಳಿಂದ ಜೋಪಡಿಯಲ್ಲಿ ನಡೆಯುತ್ತಿದೆ. ಇಷ್ಟು ದಿನ ಬಿಸಿಲಿಗೆ ತತ್ತರಿಸಿದ ಒಂದರಿಂದ 6 ನೇ ತರಗತಿ ಮಕ್ಕಳು ಈಗ ಮಳೆಯಿಂದಾಗಿ ಶಾಲೆಗೆ ಹೋಗದಂತಹ ಸ್ಥಿತಿಯಲ್ಲಿದ್ದಾರೆ.
Advertisement
Advertisement
ಖಾಸಗಿಯವರ ಜೋಪಡಿಯಲ್ಲಿ ಪಾಠ ನಡೆಸುತ್ತಿದ್ದ ಶಿಕ್ಷಕರು ಮಳೆಯಿಂದಾಗಿ ಶಾಲೆಯನ್ನ ನಡೆಸದಂತಾಗಿದೆ. ಕಷ್ಟಪಟ್ಟು ಶಾಲೆಗೆ ಬರುತ್ತಿದ್ದ 16 ಮಕ್ಕಳ ಭವಿಷ್ಯ ಈಗ ಅತಂತ್ರವಾಗಿದೆ. ಕನಿಷ್ಠ ಕಟ್ಟಡದಿಂದ ಹಿಡಿದು ಯಾವುದೇ ಸೌಲಭ್ಯಗಳಿಲ್ಲದೇ ಈ ಗ್ರಾಮದ ಶಾಲೆ ಇದ್ದರೂ ಇಲ್ಲದಂತಾಗಿದೆ.
Advertisement
Advertisement
ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಶಾಸಕ ಪ್ರತಾಪ್ ಗೌಡ ಪಾಟೀಲ್‍ಗೆ ನೂರು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮೊದಲು ಪಬ್ಲಿಕ್ ಟಿವಿ ಸಹ ಶಾಲೆ ಕುರಿತು ವರದಿ ಪ್ರಸಾರ ಮಾಡಿತ್ತು, ಆದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ವಿದ್ಯಾರ್ಥಿಗಳ ಕಷ್ಟಕ್ಕೆ ಇನ್ನೂ ಸ್ಪಂದಿಸಿಲ್ಲ.