ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ – 100 ಮಣ್ಣಿನ ಗಣೇಶ ಮೂರ್ತಿ ವಿತರಣೆ

Public TV
2 Min Read
collage RCR POLICE

– ಗಣೇಶ ಮೂರ್ತಿಯಲ್ಲಿ ತುಳಸಿ, ತರಕಾರಿ ಬೀಜ

ರಾಯಚೂರು: ಜಿಲ್ಲೆಯಲ್ಲಿ ಈ ವರ್ಷ ಗಣೇಶ ಹಬ್ಬವನ್ನು ಪೊಲೀಸ್ ಇಲಾಖೆ ವಿಭಿನ್ನವಾಗಿ ಆಚರಿಸಲು ಮುಂದಾಗಿದೆ. ಪ್ರತೀ ವರ್ಷ ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಕಾನೂನು ಸುವ್ಯವಸ್ಥೆ ಮಾತ್ರ ಕಾಪಾಡುತ್ತಿತ್ತು. ಆದರೆ ಈ ವರ್ಷ ಪೊಲೀಸ್ ಅಧಿಕಾರಿಗಳೇ ಸ್ವತಃ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದಾರೆ. ಜೊತೆಗೆ ಪರಿಸರ ಹಾಳು ಮಾಡಲು ಮುಂದಾಗುವವರ ವಿರುದ್ಧ ಖಡಕ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಪೊಲೀಸರು ಅಂದರೆ ಈಗಲೂ ಜನರಿಗೆ ಏನೋ ಒಂಥರಾ ಭೀತಿ. ಇದನ್ನು ದೂರ ಮಾಡಬೇಕು ಎಂದು ರಾಯಚೂರಿನ ಪೊಲೀಸರು ಏನೇನೋ ಕಸರತ್ತು ಮಾಡುತ್ತಿದ್ದಾರೆ. ಉತ್ತಮ ನಾಗರಿಕರಿಗೆ ಜನಸ್ನೇಹಿಯಾಗಿರಲು ಪೊಲೀಸರು ಈ ಬಾರಿ ಗಣೇಶ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಮ್ಮ ಸ್ವಂತ ಖರ್ಚಿನಲ್ಲಿ 100 ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಪರಿಸರ ಕಾಳಜಿಯನ್ನ ಮೂಡಿಸಲು ಮುಂದಾಗಿದ್ದಾರೆ.

RCR POP GANESH

ಗಣೇಶ ಮೂರ್ತಿಯಲ್ಲಿ ಹಾಗಲಕಾಯಿ, ಈರೇಕಾಯಿ, ತುಳಸಿ ಸೇರಿ ವಿವಿಧ ತರಕಾರಿ, ಗಿಡಗಳ ಬೀಜಗಳನ್ನು ಸೇರಿಸಲಾಗಿದೆ. ಗಣೇಶ ವಿಸರ್ಜನೆಯ ಬಳಿಕ ಉತ್ತಮ ಮಣ್ಣು ಸಿಗುತ್ತೆ ಜೊತೆಗೆ ಬೀಜಗಳು ಮೊಳಕೆಯೊಡೆದು ಗಿಡಗಳಾಗುತ್ತೆವೆ. ಹೀಗಾಗಿ ಈ ಮಣ್ಣಿನ ಗಣೇಶಗಳಿಗೆ ರೈತ ಗಣೇಶ ಎಂದು ಹೆಸರಿಟ್ಟು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಬೆಳಸಿಕೊಳ್ಳಲು ಎಸ್‍ಪಿ ಮನವಿ ಮಾಡಿದ್ದಾರೆ.

ಇನ್ನೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಯನ್ನು ತಯಾರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಗಣೇಶ ವಿಸರ್ಜನೆ ವೇಳೆ ಡಿಜೆ ಬಳಸಿ ಶಬ್ದ ಮಾಲಿನ್ಯ ಮಾಡುವವರಿಗೂ ಖಡಕ್ ವಾರ್ನಿಂಗ್ ಆಗಿದೆ. ಹೀಗಾಗಿ ಕೇವಲ ಹೇಳುವುದಕ್ಕಿಂದ ಮಾಡುವುದು ಉತ್ತಮ ಎಂದು ಕಲಾವಿದ ರಾಮಸಿಂಗ್ ಎಂಬುವವರಿಂದ 100 ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಪೊಲೀಸರು ವಿತರಿಸುತ್ತಿದ್ದಾರೆ. ಪರಿಸರ ಗಣೇಶಗಳನ್ನು ತಯಾರಿಸಿ ಕೊಡಲು ಎಸ್.ಪಿ ಕೇಳಿರುವುದಕ್ಕೆ ಗಣೇಶ ಮೂರ್ತಿ ತಯಾರಕ ರಾಮಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

RCR POLICE GANAPA2

ಈ ಬಾರಿ ಗಣೇಶ ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಆಚರಿಸಲು ಪೊಲೀಸ್ ಇಲಾಖೆ ಕಠಿಣವಾದ ಕ್ರಮಗಳನ್ನು ಜನ ಸ್ನೇಹಿಯಾಗಿ ತೆಗೆದುಕೊಂಡಿದೆ. ಸಾರ್ವಜನಿಕರಿಗೆ ಹಾಗೂ ಪಿಓಪಿ ಗಣೇಶ ತಯಾರಕರಿಗೆ ಸ್ವಲ್ಪಮಟ್ಟಿಗೆ ಕಷ್ಟವಾದರೂ ಉತ್ತಮ ನಿರ್ಧಾರಕ್ಕೆ ಎಲ್ಲರೂ ಜೈ ಅಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *