ರಾಯಚೂರು: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ರಂಗೇರಿದ್ದರೆ. ಬಿಸಿಲನಾಡು ರಾಯಚೂರಿನಲ್ಲಿ ಮಾತ್ರ ಚುನಾವಣಾ ಕಣ ಮಂಕಾದ್ರೂ ರಣಬಿಸಿಲೇ ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ. ಚುನಾವಣೆ ಹಿನ್ನೆಲೆ ಸರ್ಕಾರಿ ಕಚೇರಿ ಸಮಯದಲ್ಲೂ ಬದಲಾವಣೆಯಾಗದ ಹಿನ್ನೆಲೆ ಚುನಾವಣಾ ಸಿಬ್ಬಂದಿಯೂ ಬಿಸಿಲಿಗೆ ನಲುಗಿಹೋಗಿದ್ದಾರೆ. ಇನ್ನೂ ಸಾರ್ವಜನಿಕರಂತೂ ಮನೆಯಿಂದ ಹೊರಬರಲು ಹೆದರುವಂತಾಗಿದ್ದು, ಮಣ್ಣಿನ ಗಡಿಗೆ, ಜ್ಯೂಸ್ ವ್ಯಾಪಾರ ಜೋರಾಗಿ ನಡೆದಿದೆ.
ಬಿಸಿಲನಾಡು ರಾಯಚೂರು ಈಗ ಅಕ್ಷರಶಃ ರಣಬಿಸಿಲಿನಿಂದಾಗಿ ಬೆಂದು ಹೋಗುತ್ತಿದೆ. ಚುನಾವಣೆಯ ಕಾವು ಜಿಲ್ಲೆಯಲ್ಲಿ ಕಾಣದಿದ್ದರೂ ಕಳೆದ ವರ್ಷಕ್ಕಿಂತಲೂ ಈ ಬಾರಿ ಅತೀ ಹೆಚ್ಚು ಬಿಸಿಲು ದಾಖಲಾಗುವ ಲಕ್ಷಣಗಳಿದ್ದು ಜನ ತತ್ತರಿಸಿ ಹೋಗಿದ್ದಾರೆ. ಬಿರು ಬೇಸಿಗೆಯಲ್ಲೇ ಲೋಕಸಭಾ ಚುನಾವಣೆ ಬಂದಿರುವುದು ರಾಯಚೂರಿನ ಸರ್ಕಾರಿ ನೌಕರರಿಗಂತೂ ಹೇಳತೀರದ ಕಷ್ಟತಂದಿದೆ. ಯಾಕಂದ್ರೆ ಬೇಸಿಗೆ ಆರಂಭದಲ್ಲೇ ರಣಬಿಸಿಲು ಬಂದಿದ್ದು, ಮತದಾನ ವೇಳೆಗೆ ಅದಿನ್ನೆಷ್ಟು ತಾಪಮಾನ ದಾಖಲಾಗಿರುತ್ತದೋ ಗೊತ್ತಿಲ್ಲ.
Advertisement
Advertisement
ಈಗಾಗಲೇ 39 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಧ್ಯಾಹ್ನ ಹೊರಗಡೆ ಬರುವುದೇ ಕಷ್ಟವಾಗಿದೆ. ಅತಿಯಾದ ಬಿಸಿಲಿನಿಂದಾಗಿ ಕಳೆದ ವರ್ಷ ಶಿಶುಗಳು ತೀವ್ರತರದ ಕಾಯಿಲೆಗಳಿಗೆ ತುತ್ತಾಗಿದ್ದವು. ಕೆಲ ಗ್ರಾಮಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಜನ ಬಳಲಿದ್ದರು. ಇನ್ನೂ ಈ ಬಾರಿಯ ಬಿಸಿಲು ಯಾವ್ಯಾವ ಸಮಸ್ಯೆಗಳನ್ನು ತಂದೊಡ್ಡಲಿದೆಯೋ ಗೊತ್ತಿಲ್ಲ. ಸಾರ್ವಜನಿಕರಂತೂ ಈ ಬಾರಿಯ ಬಿಸಿಲಿಗೆ ಹೆದರಿದ್ದಾರೆ.
Advertisement
Advertisement
ಆರ್ ಟಿಪಿಎಸ್ ಜೊತೆ ವೈಟಿಪಿಎಸ್ ಶಾಖೋತ್ಪನ್ನು ವಿದ್ಯುತ್ ಕೇಂದ್ರ ಕಾರ್ಯಾರಂಭಿಸಿದ್ದು ಕೂಡ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣಿನ ಅಂಗಡಿಗಳು, ಎಳನೀರು, ಜ್ಯೂಸ್ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ವಿದ್ಯುತ್ ಲೋಡ್ ಶಡ್ಡಿಂಗ್ ಹಿನ್ನೆಲೆ ಫ್ಯಾನ್, ರೆಫ್ರಜರೇಟರ್ ಕೆಲಸ ಮಾಡದೇ ತತ್ತರಿಸುವ ಜನ ಮನೆಯಲ್ಲಿ ತಣ್ಣನೆ ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಅವಲಂಬಿಸುತ್ತಿದ್ದಾರೆ. ಹೀಗಾಗಿ ಬೇಸಿಗೆ ಕಾಲದ ವ್ಯಾಪಾರಗಳು ಜೋರಾಗಿ ನಡೆದಿವೆ.
ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಬಿ.ವಿ.ನಾಯಕ್‍ಗೆ ಎದುರಾಳಿಯಾಗಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಚುನಾವಣಾ ರಂಗು ಇನ್ನೂ ಏರಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಂತೂ ಬಿಸಿಲಿನಿಂದ ಎಲ್ಲರೂ ಹೈರಾಣಾಗುವುದಂತೂ ಸತ್ಯ.