ರಾಯಚೂರು: ಸಾರ್ವಜನಿಕರೆಲ್ಲಾ ಕೈಯಿಂದ ದುಡ್ಡು ಹಾಕಿ ನಿರ್ಮಿಸಿದ್ದ ಉದ್ಯಾನವನವನ್ನು ಪುರಸಭೆ ಮುಖ್ಯಾಧಿಕಾರಿಯೇ ಹಾಳು ಮಾಡಲು ಮುಂದಾಗಿರುವುದಕ್ಕೆ ಮಹಿಳೆಯರೆಲ್ಲ ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿರುವ ಘಟನೆ ರಾಯಚೂರಿನ ಮಸ್ಕಿಯಲ್ಲಿ ನಡೆದಿದೆ.
ಸಾರ್ವಜನಿಕ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಮಸ್ಕಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ರಾತ್ರೋ ರಾತ್ರಿ ಮಸ್ಕಿಯ ಬಸವೇಶ್ವರ ನಗರದಲ್ಲಿನ ಬಲಮೂರಿ ಗಣೇಶ ದೇವಸ್ಥಾನವನ್ನು ಹೊಡೆದು ಹಾಕುವ ಮೂಲಕ ಸ್ಥಳೀಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
Advertisement
Advertisement
ಪುರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನವನವನ್ನು ಸಾರ್ವಜನಿಕರೇ ಲಕ್ಷಾಂತರ ರೂಪಾಯಿ ದುಡ್ಡು ಹಾಕಿ ಇಡೀ ಜಿಲ್ಲೆಗೆ ಮಾದರಿ ಉದ್ಯಾನವನವನ್ನಾಗಿ ನಿರ್ಮಿಸಿದ್ದರು. ಕಿಡಿಗೇಡಿಗಳು, ಪುಂಡರು ಉದ್ಯಾನವನ ಹಾಳು ಮಾಡಬಾರದು ಎಂದು ಗಣೇಶನ ಪುಟ್ಟ ದೇವಾಲಯ ನಿರ್ಮಿಸಿ ಸಾರ್ವಜನಿಕರು ಪೂಜಿಸುತ್ತಿದ್ದರು. ಆದರೆ ಏಕಾಏಕಿ ದೇವಸ್ಥಾನ ತೆರವುಗೊಳಿಸಿರುವುದಲ್ಲದೆ ಜೆಸಿಬಿಯನ್ನು ಉದ್ಯಾನವನದಲ್ಲಿ ಓಡಾಡಿಸಿ ಗಿಡಮರಗಳು, ಲಾನ್, ಕಾಂಪೌಂಡ್ ಹಾಳು ಮಾಡಲಾಗಿದೆ. ದೇವಸ್ಥಾನದ ವಿಗ್ರಹವನ್ನು ಸ್ವತಃ ತೆರುವುಮಾಡಿಕೊಳ್ಳುವುದಾಗಿ ಸಾರ್ವಜನಿಕರು ಹೇಳಿದ್ದರೂ ರಾತ್ರೋರಾತ್ರಿ ಧ್ವಂಸಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಇಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಲೇ ಹೋರಾಟಕ್ಕೆ ಮುಂದಾಗಿದ್ದಾರೆ.
Advertisement
ದೇವಸ್ಥಾನಗಳನ್ನು ತೆರವುಗೊಳಿಸುವುದಕ್ಕಿಂತ ಮುಂಚೆ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು. ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಸಂಬಂಧ ಪಟ್ಟವರಿಗೆ ಒಂದು ವಾರಗಳ ಕಾಲವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದ್ದರೂ ಸಹ ಮುಖ್ಯಾಧಿಕಾರಿಗಳು ಸುಪ್ರೀಂ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ. ದೇವಸ್ಥಾನದ ಒಳಗಿನ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ದೇವಸ್ಥಾನ ದ್ವಂಸಗೊಳಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.
Advertisement
ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಸುಪ್ರೀಂ ಆದೇಶದಂತೆ ದೇವಸ್ಥಾನ ತೆರವುಗೊಳಿಸಲು ನಾವು ಸಿದ್ಧರಿದ್ದೇವು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ರಾತ್ರೋ ರಾತ್ರಿ ದೇವಸ್ಥಾನ ದ್ವಂಸಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ.