ರಾಯಚೂರು: ಕಳೆದ ಮೂರು ವರ್ಷಗಳಿಂದ ಬರಗಾಲವನ್ನೇ ಅನುಭವಿಸಿದ್ದ ರಾಯಚೂರಿನ ರೈತರು ಈ ಬಾರಿ ತಡವಾದರೂ ಉತ್ತಮ ಮಳೆಯನ್ನು ಕಂಡಿದ್ದಾರೆ. ಮಳೆಯಿಂದಾಗಿ ಉತ್ತಮ ಫಸಲನ್ನೂ ಪಡೆದಿದ್ದಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ.
ಖರೀದಿ ಕೇಂದ್ರಗಳನ್ನು ತೆರೆದು ಬೆಲೆ ಕುಸಿತ ಕಂಡಿರುವ ಬೆಳೆಗಳನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಇದು ರೈತರನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಿದ ರೈತರು ಬೆಲೆಯಿಲ್ಲದೆ ಸಿಕ್ಕ ಬೆಲೆಗೆ ಮಾರುವ ಸ್ಥಿತಿಯಲ್ಲಿದ್ದಾರೆ. ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರೆ, ಇನ್ನೂ ಕೆಲವರ ಬೆಳೆ ಶೀಘ್ರದಲ್ಲೇ ಕೈಗೆ ಬರಲಿದೆ.
Advertisement
Advertisement
ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡುವ ಗುರಿ ಇದ್ದು ಈಗಾಗಲೇ 1.08 ಲಕ್ಷ ಹೆಕ್ಟರ್ ಭತ್ತವನ್ನು ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ ಸುಮಾರು 42.31 ಕ್ವಿಂಟಾಲ್ ಭತ್ತದ ಇಳುವರಿ ಬರುತ್ತಿದ್ದು, 76 ಲಕ್ಷ ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಇದೇ ರೀತಿ ಜಿಲ್ಲೆಯಲ್ಲಿ 47,581 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಬೇಕಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 62,666 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ 3.72 ಕ್ವಿಂಟಾಲ್ ತೊಗರಿ ಇಳುವರಿ ಬರಲಿದೆ. ಇದರಿಂದಾಗಿ 2.33 ಲಕ್ಷ ಕ್ವಿಂಟಾಲ್ ತೊಗರಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಭತ್ತವನ್ನು ಕಟಾವು ಮಾಡಿ 2 ತಿಂಗಳು, ತೊಗರಿಯನ್ನು ಕಟಾವು ಮಾಡಿ ಒಂದುವರೆ ತಿಂಗಳಾಗಿದೆ. ಆದರೆ ಈಗ ಮಾರಾಟ ಮಾಡಿದರೆ ರೈತ ಸಂಪೂರ್ಣವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ. ಕಾರಣ ಮಾರುಕಟ್ಟೆಯಲ್ಲಿ ಭತ್ತ ಹಾಗು ತೊಗರಿ ದರ ಅತ್ಯಂತ ಕಡಿಮೆ ಇದೆ. ಉತ್ತಮ ದರಕ್ಕಾಗಿ ರೈತ ಕಾಯಿಯುತ್ತಿದ್ದಾನೆ.
Advertisement
Advertisement
ಸರ್ಕಾರ ಸಕಾಲಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭಿಸದೆ ಇರುವುದರಿಂದ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ. ಕೆಲವು ರೈತರು ಮಾತ್ರ ಖರೀದಿ ಕೇಂದ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ತೊಗರಿಯನ್ನು ಖರೀದಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ತೊಗರಿಗೆ ಕೇಂದ್ರ ಸರ್ಕಾರ 4,800 ರೂಪಾಯಿ ಅದಕ್ಕೆ ರಾಜ್ಯ ಸರ್ಕಾರ 300 ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿ ರೈತರಿಂದ ನೊಂದಣಿ ಕಾರ್ಯ ಆರಂಭಿಸಬೇಕಾಗಿದೆ. ಸರ್ಕಾರವು ಕೃಷಿ ನೋಂದಣಿಗಾಗಿ ಸಾಫ್ಟವೇರ್ ಅಭಿವೃದ್ಧಿ ಮಾಡಿದ್ದು, ಇದುವರೆಗೂ ಸಾಫ್ಟವೇರ್ ರಾಯಚೂರಿಗೆ ಬಂದಿಲ್ಲ. ಇದರಿಂದ ನೋಂದಣಿಯಾಗಿಲ್ಲ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮಾಡಲು ಅವಕಾಶ ನೀಡಿದೆ. ಇನ್ನೂ ಭತ್ತವನ್ನು 1,835 ರೂಪಾಯಿಗೆ ಪ್ರತಿ ಕ್ವಿಂಟಾಲ್ ಖರೀದಿಸಲು ಭತ್ತದ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಮಾರುಕಟ್ಟೆಯಲ್ಲಿ ಇದೇ ದರವಿದೆ.
ಭತ್ತವನ್ನು ಪ್ರತಿ ಕ್ವಿಂಟಾಲಿಗೆ 2,500 ರೂಪಾಯಿಯಂತೆ ಖರೀದಿಸಲು ಒತ್ತಾಯಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ 2,000 ರೂಪಾಯಿಯಂತೆ ಖರೀದಿಸುವ ಭರವಸೆ ನೀಡಿದೆ. ಆದರೆ ಇನ್ನೂ ಆದೇಶ ಬಂದಿಲ್ಲ. ಈ ಗೊಂದಲದ ಮಧ್ಯೆ ರೈತರು ಎಪಿಎಂಸಿ ಗಳಲ್ಲಿ ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಮುಂದೆ ಖರೀದಿ ಕೇಂದ್ರಗಳು ಆರಂಭವಾದರೂ ಅವುಗಳು ರೈತರಿಗಿಂತ ವ್ಯಾಪಾರಿಗಳಿಗೆ ಅನುಕೂಲ ಎನ್ನುವ ಪರಸ್ಥಿತಿಯಿದೆ.
ರಾಯಚೂರು ಎಪಿಎಂಸಿಗೆ ನಿತ್ಯವೂ 10 ಸಾವಿರ ಕ್ವಿಂಟಾಲ್ ತೊಗರಿ ಮಾರಾಟಕ್ಕಾಗಿ ಬರುತ್ತಿದೆ. ಈಗ ಮಾರುಕಟ್ಟೆಯಲ್ಲಿ ತೊಗರಿಯ ದರ ಸರಾಸರಿ 5,220 ರೂಪಾಯಿ ಇದೆ. ಆದರೆ ಸರ್ಕಾರದ ಗೊಂದಲ ನೀತಿಯಿಂದಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾಗದೆ ರೈತ ಸಂಕಷ್ಟ ಅನುಭವಿಸುವಂತಾಗಿದೆ.