ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಐದು ಎಕರೆ ಹಣ್ಣಿನ ತೋಟ ಸಂಪೂರ್ಣವಾಗಿ ಭಸ್ಮವಾಗಿದೆ.
ಈ ಘಟನೆಯಲ್ಲಿ ಕಷ್ಟಪಟ್ಟು ಬೆಳೆದ ನೂರಾರು ಹಣ್ಣಿನ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ರೈತ ಚಂದ್ರಶೇಖರ ಭೋವಿಗೆ ಸೇರಿದ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೈತ ಬೀದಿಗೆ ಬಂದಿದ್ದಾನೆ. ಮಾವು, ಸಪೋಟ ಸೇರಿದಂತೆ ಹಣ್ಣಿನ ಗಿಡಗಳು ಹಾಗೂ 10 ಸಾಗವಾನಿ ಗಿಡಗಳು ಬೆಂಕಿಗಾಹುತಿಯಾಗಿವೆ.
ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸಪಟ್ಟರೂ ಬೇಸಿಗೆ ಹಿನ್ನೆಲೆ ಬೆಂಕಿ ಕೆನ್ನಾಲಿಗೆ ಇಡೀ ತೋಟ ಸುಟ್ಟು ಭಸ್ಮವಾಗಿದೆ. ನೀರಿಗಾಗಿ ಮಾಡಿದ್ದ ಪೈಪ್ ಲೈನ್, ಮೋಟರ್ ಸುಟ್ಟು ಹೋಗಿವೆ. ಮಾವು, ಸಪೋಟ ಸೀಜನ್ ಬಂದಿದ್ದರಿಂದ ಒಳ್ಳೆಯ ಲಾಭದ ನೀರಿಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ. ಲಾಕ್‍ಡೌನ್ ಸಹ ಸಡಿಲಿಕೆಯಾಗಿದ್ದರಿಂದ ಹಣ್ಣುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕೂಡ ಸುಲಭವಾಗುತ್ತಿತ್ತು. ಆದರೆ ಆಕಸ್ಮಿಕವಾಗಿ ತಗುಲಿದ ಬೆಂಕಿ ರೈತನ ಬದುಕನ್ನೇ ಹಾಳು ಮಾಡಿದೆ.
ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ರೈತನಿಗಾದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.