ರಾಯಚೂರು: ಈಗ ಎಲ್ಲಿ ನೋಡಿದರೂ ಈರುಳ್ಳಿಯದ್ದೆ ಮಾತು. ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಗ್ರಾಹಕರಿಗೆ ಹೊರೆಯಾಗುತ್ತಿದೆ. ಆದರೆ ಅದೆಷ್ಟೋ ವರ್ಷಗಳಿಂದ ಸಾಲಗಾರರಾಗಿದ್ದ ರೈತರು ಈಗ ಸಾಲ ಮುಕ್ತರಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕೇಳಿರದ ಬೆಲೆ ಈರುಳ್ಳಿಗೆ ಬಂದಿರುವುದು ರಾಯಚೂರಿನ ನೂರಾರು ರೈತರ ಬದುಕು ಬಂಗಾರವಾಗಿಸಿದೆ.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ 30 ವರ್ಷಗಳಲ್ಲಿ ಕೇಳರಿಯದ ಭರ್ಜರಿ ಬೆಲೆಯಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಇದರಿಂದ ಈರುಳ್ಳಿ ಬೆಳೆಗಾರರ ನೀರಿಕ್ಷೆಗೂ ಮೀರಿ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸದ್ಯ ಈರುಳ್ಳಿ ಬೆಲೆ ಕ್ವಿಂಟಾಲ್‍ಗೆ 12,200 ರೂ.ಗೆ ಮಾರಾಟವಾಗುತ್ತಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
Advertisement
Advertisement
ಮೊದಲೆಲ್ಲಾ ಬರೀ ನಷ್ಟವನ್ನೇ ಅನುಭವಿಸುತ್ತಿದ್ದ ಈರುಳ್ಳಿ ಬೆಳೆಗಾರರು ಮೊದಲ ಬಾರಿಗೆ ಲಕ್ಷ, ಲಕ್ಷ ರೂಪಾಯಿ ಎಣಿಸುವಂತಾಗಿದೆ. ಅದೆಷ್ಟೋ ವರ್ಷಗಳಿಂದ ಸಾಲವನ್ನು ಮಾಡಿಕೊಂಡೇ ಕೃಷಿ ಮಾಡುತ್ತಿದ್ದ ರೈತರ ಮುಖದಲ್ಲಿ ಈಗ ಸಂತೋಷ ಮೂಡಿದೆ. ಅತೀವೃಷ್ಠಿ, ಪ್ರವಾಹದ ಪರಿಣಾಮ ಈರುಳ್ಳಿ ಕೊರತೆ ಉಂಟಾಗಿದ್ದು, ರಾಯಚೂರಿನಿಂದ ಆಂಧ್ರ ಪ್ರದೇಶ, ತೆಲಂಗಾಣಕ್ಕೂ ಈರುಳ್ಳಿ ಹೋಗುತ್ತಿದೆ. ಹೀಗಾಗಿ ಇಲ್ಲಿನ ರೈತರ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಿಂಗಸುಗೂರಿನ ರೈತ ಮಹಾಂತೇಶ್, ನಾನು 11 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದೇನೆ. ಪ್ರತಿ ವರ್ಷ ನಾವು ವೆಚ್ಚ ಮಾಡುತ್ತಿದ್ದ ಹಣ ಕೂಡ ವಾಪಸ್ ಬರುತ್ತಿರಲಿಲ್ಲ. ಈ ವರ್ಷ 5 ಲಕ್ಷ ರೂ. ಆದಾಯ ಬಂದಿದೆ. ಹೀಗಾಗಿ ಬ್ಯಾಂಕ್ ಸಾಲವನ್ನು ಪಾವತಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಈರುಳ್ಳಿ ಬೆಲೆ ಏರಿಕೆಯಿಂದ ಅನೇಕ ರೈತರಿಗೆ ಅನುಕೂಲವಾಗಿದೆ. ಅಪರೂಪಕ್ಕೆ ಬಂದಿರುವ ಉತ್ತಮ ಬೆಲೆ ಬಗ್ಗೆ ಬದುಕಲು ಕಷ್ಟ ಎನ್ನುವ ರೀತಿ ನೌಕರಿದಾರರು ಮಾತನಾಡುವುದು ಎಷ್ಟು ಸರಿ ಎಂದು ಮಹಾಂತೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ಬೆಲೆ ಏರಿಕೆಯಿಂದ ರೈತರ ಕಷ್ಟಗಳು ತೀರಿ ಬದುಕು ಹಸನಾಗುತ್ತಿರುವುದು ಒಂದೆಡೆಯಾದರೆ, ಬಡ, ಮಧ್ಯಮವರ್ಗದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಒಂದು ಕೆ.ಜಿ.ಗೆ 140 ರೂಪಾಯಿಯಂತೆ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಇದರಿಂದ ಅಡುಗೆಯಲ್ಲಿ ಈರುಳ್ಳಿಯನ್ನ ಬಳಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಆದ್ರೆ ತರಕಾರಿ ವ್ಯಾಪಾರಿಗಳು ಮಾತ್ರ ಯಾವಾಗ ಬೆಲೆ ಹೆಚ್ಚಾಗುತ್ತೋ, ಯಾವಾಗ ಕಡಿಮೆಯಾಗುತ್ತೋ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಹೆಚ್ಚು ಈರುಳ್ಳಿಯನ್ನ ಖರೀದಿಸಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದೇವೆ ಅಂತ ತರಕಾರಿ ವ್ಯಾಪಾರಿ ಮಹಾವೀರ್ ಆತಂಕ ವ್ಯಕ್ತಪಡಿಸಿದ್ದಾರೆ.