ರಾಯಚೂರು: ಕಾಲು ಮುರಿತಕ್ಕೆ ಚಿಕಿತ್ಸೆಗಾಗಿ ಮಂತ್ರಾಲಯ ಬಳಿಯ ಕುಂಬಳಕ್ಕೆ ಹೋಗಿದ್ದ ವೃದ್ಧರು ವಾಪಸ್ ತಮ್ಮ ಊರು ಕಲಬುರಗಿಯ ಸೇಡಂಗೆ ಹೋಗಲಾಗದೇ ರಾಯಚೂರು ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ಇದೀಗ ತಮ್ಮನ್ನು ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾರೆ.
ಲಾಕ್‍ಡೌನ್ ಮುಂಚೆ ಆಂಧ್ರಪ್ರದೇಶದ ಕುಂಬಳದಲ್ಲಿ ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ವೇಳೆಯೇ ಇಡೀ ದೇಶ ಲಾಕ್‍ಡೌನ್ ಆಗಿದ್ದರಿಂದ ಆಂಧ್ರಪ್ರದೇಶದಲ್ಲೇ ಸಿಲುಕಿದ್ದರು. ಮಂತ್ರಾಲಯ ರೈಲ್ವೇ ಸ್ಟೇಷನ್ ನಲ್ಲೇ ಒಂದು ತಿಂಗಳ ಕಾಲ ಕಳೆದಿದ್ದಾರೆ. ಕಾಲು ನೋವು ಕಡಿಮೆಯಾಗುತ್ತಿದ್ದಂತೆ ಕರ್ನಾಟಕ ಗಡಿವರೆಗೂ ಸುಮಾರು 15 ಕಿ.ಮೀ ನಡೆದುಕೊಂಡೇ ಬಂದಿದ್ದಾರೆ. ಬಳಿಕ ರಾಯಚೂರು ಗಡಿ ಗಿಲ್ಲೆಸೂಗುರು ಕ್ಯಾಂಪ್ ಚೆಕ್ ಪೋಸ್ಟ್ ನಲ್ಲಿ ಅಲ್ಲಿನ ಸಿಬ್ಬಂದಿ ತಪಾಸಣೆ ಮಾಡಿ ರಾಯಚೂರಿಗೆ ಬಸ್ಸಿನಲ್ಲಿ ಕಳುಹಿಸಿಕೊಟ್ಟಿದ್ದಾರೆ.
Advertisement
Advertisement
ಆದರೆ ರಾಯಚೂರಿನಿಂದ ಕಲಬುರಗಿಗೆ ಹೋಗಲು ಬಸ್ ವ್ಯವಸ್ಥೆಯಿಲ್ಲ. ಹೀಗಾಗಿ ರಾಯಚೂರಿನ ಬಸ್ ನಿಲ್ದಾಣ ಬಳಿಯೇ ಮೂರು ಜನ ವೃದ್ಧರು ಹಾಗೂ ಓರ್ವ ಬಾಲಕ ಉಳಿದುಕೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ ಕಾಲಕಳೆಯುತ್ತಿದ್ದಾರೆ. ಜಿಲ್ಲಾಡಳಿತ ನಮ್ಮನ್ನು ಸೇಡಂಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.