ರಾಯಚೂರು: ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆ 32, 34 ಎಂದು ವಿವಾದ ಸೃಷ್ಠಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊನೆಗೆ 30 ಜಿಲ್ಲೆಗಳು ಇದೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ರಾಯಚೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಟೀಲ್ ಜಿಲ್ಲೆಗಳ ಸಂಖ್ಯೆಯ ನನ್ನ ಹೇಳಿಕೆಗೆ ಕೆಲವರು ಪ್ರತಿಕ್ರಿಯೆ ನೀಡಿದ್ದರು, ಬೆಂಗಳೂರಿನಲ್ಲಿ ಕುಳಿತು ಮಾತನಾಡುವವರಷ್ಟು ನಾನು ಬುದ್ದಿವಂತನಲ್ಲ. ರಾಜ್ಯದಲ್ಲಿ 30 ಜಿಲ್ಲೆ ಇರುವುದು ನಿಜ ಪಕ್ಷ ಸಂಘಟನಾ ಹಾಗೂ ಅಭಿವೃದ್ಧಿಗಾಗಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಬಿಜೆಪಿ ಮಾಡಿಕೊಂಡಿದೆ ಎಂದು ಹೇಳಿದರು.
ಪಕ್ಷ ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವುದು ನನಗೆ ಕೊಟ್ಟ ಹುದ್ದೆಯಲ್ಲ, ಜವಾಬ್ದಾರಿ. ಮಹಾತ್ಮಗಾಂಧಿ ರಾಮರಾಜ್ಯ ಆಗಬೇಕು ಎಂದು ಬಯಸಿದರು. ಸ್ವಾತಂತ್ರ್ಯ ಬಳಿಕ ಗಾಂಧಿ ಹೆಸರಿನಲ್ಲಿ ರಾಜಕೀಯ ಆರಂಭವಾಯಿತು. ರಾಮನಂತ ಆದರ್ಶ ವ್ಯಕ್ತಿಗಳನ್ನು ನಿರ್ಮಿಸಿದರೆ ಮಾತ್ರ ದೇಶ ಅಭಿವೃದ್ಧಿ ಆಗುತ್ತೆ. ನರೇಂದ್ರ ಮೋದಿ ಗಾಂಧಿ ಕನಸುಗಳನ್ನ ನನಸು ಮಾಡಲು ಪ್ರಯತ್ನ ಮಾಡಿದ್ದಾರೆ. ಕಾಶ್ಮೀರ ನಮ್ಮದು, ಈ ದೇಶದಲ್ಲಿ ಎರಡು ಧ್ವಜಗಳಿರಬಾರದು ಎಂದು ಕಾಶ್ಮೀರಕ್ಕೆ ಮೋದಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ತಿಳಿಸಿದರು.
ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕಟೀಲ್ ನೆರೆ ಪರಿಹಾರದ ವಿಚಾರದಲ್ಲಿ ಯಾರೂ ಮಾಡದಷ್ಟು ಕೆಲಸ ಸಿಎಂ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೇ ಮಾಡುತ್ತೇವೆ. ಯಡಿಯೂರಪ್ಪ ಸಿಎಂ ಆಗಿ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.