ರಾಯಚೂರು: ಬಿಸಿಲನಾಡು ರಾಯಚೂರಲ್ಲಿ ಕುಡಿಯೋ ನೀರಿನ ತೊಂದರೆ ಒಂದೆಡೆಯಾದರೆ ನಾಗಲಾಪುರ ಗ್ರಾಮದಲ್ಲಿ ನೀರು ಕುಡಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಬೋರ್‍ವೆಲ್ ನೀರು ಕುಡಿದರೆ ಸಾವಿನ ಭೀತಿ ಎದುರಾಗಿದೆ.
ರಾಯಚೂರು ತಾಲೂಕಿನ ನಾಗಲಾಪುರ ಸುಮಾರು ನೂರು ಮನೆಗಳಿರೋ ಗ್ರಾಮ. ಇಲ್ಲಿ 500 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇದರಲ್ಲಿ 250 ಕ್ಕೂ ಹೆಚ್ಚು ಜನ ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆಯನ್ನ ಎದುರಿಸುತ್ತಲೇ ಇದ್ದಾರೆ. ಇವರಲ್ಲಿ 20 ಜನ ಈಗಾಗಲೇ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ಕೆಲವರು ಕೋಲು, ವಾಕಿಂಗ್ ಸ್ಟಿಕ್ ಸಹಾಯದಿಂದ ಓಡಾಡುತ್ತಿದ್ದಾರೆ. ಬಹಳ ಜನ ನಿತ್ಯ ಕೈಕಾಲು ನೋವು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಇವರು ನಿತ್ಯ ಕುಡಿಯುತ್ತಿರೋ ನೀರು. ಇಲ್ಲಿನ ಜನ ಕಳೆದ 15 ವರ್ಷದಿಂದ ಫ್ಲೋರೈಡ್ ನೀರೇ ಕುಡಿಯುತ್ತಿದ್ದಾರೆ.
ಈ ಗ್ರಾಮಕ್ಕೆ ನೀರಿನ ಮೂಲವೇ ಇಲ್ಲದ ಕಾರಣ ಪಕ್ಕದ ಗ್ರಾಮ ನಾಗಲಾಪುರ ಕ್ಯಾಂಪ್‍ನಿಂದ ಕೊಳವೆಬಾವಿ ನೀರನ್ನ ಇಲ್ಲಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಈ ನೀರನ್ನ ಕುಡಿಯುತ್ತಿರೋ ಜನ ನರ, ಕೀಲು, ಮೂಳೆ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಗ್ರಾಮದ ನೀರಿನ ಮಾದರಿಯನ್ನ ಪಬ್ಲಿಕ್ ಟಿವಿ ಪ್ರಯೋಗಾಲಯಕ್ಕೆ ಕಳುಹಿಸಿ ವರದಿಯನ್ನ ಪಡೆದಿದೆ. ವರದಿಯಿಂದ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಸಲ್ಫೆಟ್ ಅಂಶ ಮೀತಿಮೀರಿ ಇರೋದು ಬಯಲಾಗಿದೆ. ಒಂದು ಲೀಟರ್ ನೀರಿಗೆ 200 ರಿಂದ 400 ಮಿಲಿಗ್ರಾಂ ಇರಬೇಕಾದ ಸಲ್ಫೇಟ್ 700 ಮಿಲಿಗ್ರಾಂ ಇದೆ. 1 ರಿಂದ 1.5 ಮಿಲಿಗ್ರಾಂ ಇರಬೇಕಾದ ಫ್ಲೋರೈಡ್ 2.01 ಮಿಲಿಗ್ರಾಂ ಇದೆ.
ಈ ಫ್ಲೋರೈಡ್ ನೀರು ಕುಡಿದ ಗ್ರಾಮಸ್ಥರು ಸಾವಿನ ಭೀತಿ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದ್ರೂ ಎಚ್ಚೆತ್ತುಕೊಂಡು ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv