ರಾಯಚೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಫೌಂಡೇಷನ್ ನಿಂದ ಹಂಚಲಾಗಿದ್ದ ಅಕ್ಕಿಯನ್ನು ಮುಸ್ಲಿಮರು ತಿರಸ್ಕರಿಸಿದ್ದಾರೆ.
5 ಕೆಜಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ಇಂದು ಎಲ್‍ಬಿಎಸ್ ನಗರ, ಜಲಾಲ್‍ನಗರ ಸೇರಿದಂತೆ ಮುಸ್ಲಿಮ್ ಜನ ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ವಿತರಿಸಲಾಗಿತ್ತು. ಕೆಲವರು ಅಕ್ಕಿಯ ಚೀಲವನ್ನು ಸ್ವೀಕರಿಸಿದರೆ ಇನ್ನೂ ಕೆಲವರು ಇದು ಚುನಾವಣೆ ಗಿಮಿಕ್ ಎಂದು ಹೇಳಿ ಆಹಾರ ಪದಾರ್ಥಗಳನ್ನು ಸ್ವೀಕರಿಸದೇ ತಿರಸ್ಕರಿಸಿದ್ದಾರೆ.
ತಿರಸ್ಕರಿಸಿದ್ದು ಯಾಕೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಾಲ್ಕು ರಂಜಾನ್ ಬಂದಿವೆ. ಇದೂವರೆಗೆ ಆಹಾರ ಪದಾರ್ಥಗಳನ್ನು ವಿತರಿಸದ ನೀವು ಈಗ ಯಾಕೆ ಅಕ್ಕಿ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳ ದೀಪಾವಳಿ, ದಸರಾ, ಯುಗಾದಿಗೆ ಯಾಕೆ ಕೊಡಲಿಲ್ಲ. ಅಲ್ಲೂ ಬಡವರಿದ್ದಾರೆ ಎಂದು ಹೇಳಿ ಮುಸ್ಲಿಮ್ ಬಾಂಧವರು ತಿರಸ್ಕರಿಸಿದ್ದಾರೆ.
ಚುನಾವಣೆ ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್‍ನವರು ರಂಜಾನ್ ಹೆಸರಲ್ಲಿ ರಾಜಕೀಯ ಲಾಭಪಡೆಯಲು ಮುಂದಾಗಿದ್ದಾರೆ. ಹೀಗಾಗಿ ನಾವು ಈ ಆಹಾರವನ್ನು ತಿರಸ್ಕರಿಸಿದ್ದೇವೆ ಎಂದು ನಿವಾಸಿ ಕೈಸರ್ ಹುಸೇನ್ ತಿಳಿಸಿದ್ದಾರೆ.
ಏನೇನು ವಿತರಣೆ ಮಾಡಲಾಗಿದೆ?
5 ಕೆಜಿ ಅಕ್ಕಿ, ಅಡುಗೆ ಎಣ್ಣೆ, ಪಿಸ್ತಾ, ಗೊಡಂಬಿ, ಸಕ್ಕರೆ, ಬಾದಾಮಿಯನ್ನು ನೀಡಿ ರಂಜಾನ್ ಹಬ್ಬದ ಶುಭಾಶಯ ಕೋರಲಾಗಿದೆ. ಅಕ್ಕಿಯ ಚೀಲದ ಮೇಲೆ ಎನ್.ಎಸ್.ಬೋಸರಾಜು ಹಾಗೂ ರಾಯಚೂರು ಸಂಸದ ಬಿ.ವಿ.ನಾಯಕ್ ಭಾವಚಿತ್ರವಿತ್ತು.