ರಾಯಚೂರು: ನಗರದ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸಾಯಿ ಅಲಿಯಾಸ್ ಸೌರಭ್ ಹೈದ್ರಾಬಾದ್‍ನಲ್ಲಿ ಸೆರೆಸಿಕ್ಕಿದ್ದಾನೆ. ಸೆಪ್ಟೆಂಬರ್ 29ರಂದು ಒಂದೇ ಕುಟುಂಬದ ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಹೈದ್ರಾಬಾದ್, ವಿಜಯವಾಡದಲ್ಲಿ ಓಡಾಡಿಕೊಂಡಿದ್ದ ಆರೋಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಪತ್ನಿ, ಅತ್ತೆ, ಪತ್ನಿ ತಂಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಸಂತೋಷಿ, ವೈಷ್ಣವಿ ಮತ್ತು ಆರತಿ ಎಂಬುವವರ ಕೊಲೆಯಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎರಡು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್
ರೌಡಿಶೀಟರ್ ಆಗಿರುವ ಸಾಯಿ ವಿರುದ್ಧ ಹೈದ್ರಾಬಾದ್ ನ ವಿವಿಧ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣದಲ್ಲಿ ಆರೋಪಿಯ ಇಬ್ಬರು ಸ್ನೇಹಿತರು ಭಾಗಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿ ವಿಚಾರಣೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ತಿಳಿಸಿದ್ದಾರೆ.