ರಾಯಚೂರು: ಶವಸಂಸ್ಕಾರದ ವೇಳೆ ಶಂಕೆ ಮೂಡಿ ದೂರು ದಾಖಲಿಸಲಾಗಿದ್ದ ಲಾಲ್ ಸಾಬ್ ಕೊಲೆ ಪ್ರಕರಣದಲ್ಲಿ ಪತ್ನಿಯೇ ಮಾಸ್ಟರ್‌ಮೈಂಡ್ ಆಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಮೃತ ಲಾಲ್ ಸಾಬ್ ಪತ್ನಿ ಹಾಗೂ ಆಕೆಯ ಪ್ರಿಯಕರ ಅನ್ವರ್ ಭಾಷನನ್ನು ಗಬ್ಬೂರು ಠಾಣೆಯ ಪೊಲೀಸರು (Gabbur Police Station) ಬಂಧಿಸಿದ್ದಾರೆ. ತನಿಖೆ ವೇಳೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ತಾನೇ ಸಂಚು ರೂಪಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಈ ವಿಚಾರವಾಗಿ ಸಂಬಂಧದಲ್ಲಿ ಸಹೋದರನಾಗುವ ಪ್ರಿಯಕರನಿಗೆ ಪತಿಯ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಳು. ಇದನ್ನೇ ಆಧರಿಸಿ ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ (Rope) ಬಿಗಿದು ಕೊಲೆ ಮಾಡಿದ್ದಾಗಿ ಅನ್ವರ್ ಭಾಷ ಕೂಡ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಶವ ಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆ – ಈಗ ಕೊಲೆ ಕೇಸ್ ದಾಖಲು
ಏನಿದು ಪ್ರಕರಣ?
ಮೇ 24 ರಂದು ದೇವದುರ್ಗದ (Devadurga) ಸುಂಕೇಶ್ವರಹಾಳದ (Sunkeshwarhal) ರಸ್ತೆಯಲ್ಲಿ ಲಾಲ್ ಸಾಬ್ ಮೃತ ದೇಹ ಪತ್ತೆಯಾಗಿತ್ತು. ಎಲ್ಲರೂ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಶವಸಂಸ್ಕಾರದ ವೇಳೆ ಕತ್ತಿನಲ್ಲಿ ಹಗ್ಗದ ಗುರುತು ಪತ್ತೆಯಾಗಿತ್ತು. ಬಳಿಕ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಟ್ ವಿಚಾರಕ್ಕೆ ಗ್ರಾಮಪಂಚಾಯ್ತಿ ಸಿಬ್ಬಂದಿಯಿಂದ ಮಹಿಳೆಗೆ ಚಾಕು ಇರಿತ