ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗಿದೆ. ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ದಾಳಿ ಮಾಡಿರುವ ಪೊಲೀಸರು ಸುಮಾರು 2,000 ಲೀಟರ್ ಕಳ್ಳಭಟ್ಟಿ ಜಪ್ತಿಮಾಡಿದ್ದಾರೆ. ನಿರಂತರವಾಗಿ ದಾಳಿಗಳು ನಡೆದಿದ್ದರು ಕಳ್ಳಭಟ್ಟಿ ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಮಸ್ಕಿ ಠಾಣೆ ಪಿಎಸ್‍ಐ ಸಣ್ಣ ವೀರೇಶ್ ನೇತೃತ್ವದಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಕಳ್ಳಭಟ್ಟಿಯನ್ನ ಪೊಲೀಸರು ನಾಶ ಪಡಿಸಿದ್ದಾರೆ. ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ದಾಳಿ ಹಿನ್ನೆಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಿಂಗಸುಗೂರು, ಮಸ್ಕಿ ತಾಲೂಕುಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ನಡೆದಿದ್ದು, ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದರೂ ದಂಧೆ ನಿಂತಿಲ್ಲ. ಅಲ್ಲದೆ ದಾಳಿ ವೇಳೆ ಕಳ್ಳಭಟ್ಟಿ ಸೇಂದಿ ಸಿಕ್ಕರೂ ದಂಧೆಕೋರರು ಮಾತ್ರ ಪೊಲೀಸರ ಕೈಗೆ ಸಿಗದೆ ಪರಾರಿಯಾಗುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸಾವಿರಾರು ಲೀಟರ್ ಕಳ್ಳಭಟ್ಟಿ ಜಪ್ತಿಯಾಗಿದೆ.