– ಬೆಳೆಗೆ ಖರ್ಚು ಮಾಡಿದ ಹಣವೂ ಸಿಗದ ಸ್ಥಿತಿಯಲ್ಲಿ ಅನ್ನದಾತ
– ಮುಕ್ತ ಮಾರುಕಟ್ಟೆಯಲ್ಲಿ ಕುಸಿದ ಭತ್ತದ ಬೆಲೆ
ರಾಯಚೂರು: ಉತ್ತಮ ಲಾಭದ ನಿರೀಕ್ಷೆಯಿಂದ ನಷ್ಟದ ವರ್ತಮಾನ ಕಾಣುತ್ತಿರುವವರ ಸಾಲಿನಲ್ಲಿ ಈರುಳ್ಳಿ ಬೆಳೆಗಾರರ ಬಳಿಕ ಈಗ ಭತ್ತ ಬೆಳೆದ ರೈತರು ನಿಂತಿದ್ದಾರೆ. ಒಳ್ಳೆಯ ಗುಣಮಟ್ಟದ ಭತ್ತ ಬೆಳೆದಿದ್ದರೂ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರಾಯಚೂರಿನಲ್ಲಂತೂ ಸಾವಿರಾರು ರೈತರು ಕೃಷಿ ಉತ್ಪನ್ನ ಮಾರುಕಟ್ಟಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕೃಷಿ ಕೂಡ ಒಂದು ರೀತಿಯಲ್ಲಿ ಜೂಜಾಟವಾಗಿದೆ ಎಂದು ನೊಂದ ರೈತರೇ ಹೇಳುತ್ತಿದ್ದಾರೆ. ಮೂರು ದಶಕಗಳಲ್ಲಿ ಕೇಳರಿಯದ ಬೆಲೆ ಕಂಡಿದ್ದ ಈರುಳ್ಳಿ ಬೆಳೆಗಾರರು ಈಗ ಪುನಃ ನಿರಾಶೆಗೆ ಮರಳಿದ್ದಾರೆ. ಅವರ ಜೊತೆ ಈಗ ಭತ್ತದ ಬೆಳೆಗಾರರು ಸೇರಿಕೊಳ್ಳಬೇಕಾದ ಅನಿವಾರ್ಯ ಪತಿಸ್ಥಿತಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದೆ.
Advertisement
Advertisement
ಟಿಎಲ್‍ಬಿಸಿ, ಎನ್‌ಆರ್‌ಬಿಸಿ ಕಾಲುವೆ ಆಶ್ರಿತ ರಾಯಚೂರಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನ ಬೆಳೆದಿದ್ದಾರೆ. ಎಕರೆಗೆ ಏನಿಲ್ಲವೆಂದರೂ 30ರಿಂದ 40 ಸಾವಿರ ರೂಪಾಯಿ ಖರ್ಚುಮಾಡಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತ 1,200ರಿಂದ 1,800 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬರುತ್ತಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಇನ್ನೂ ವ್ಯಾಪಾರಿಗಳು ಅಕ್ಕಿ ಬೆಲೆ ಹೆಚ್ಚಾದರೆ ಭತ್ತದ ಬೆಲೆ ಹೆಚ್ಚಾಗಬಹುದು ಎನ್ನುತ್ತಿದ್ದಾರೆ.
Advertisement
ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ದಾವಣಗೆರೆ ಜಿಲ್ಲೆಯಲ್ಲಿ ರೈತರು ಭತ್ತವನ್ನು ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಉತ್ತಮ ಗುಣಮಟ್ಟದ ಭತ್ತ ಕೈಗೆ ಬಂದ ಹೊತ್ತಲ್ಲೇ ಬೆಲೆ ಕುಸಿತವಾಗಿದೆ. ಸದ್ಯದ ಬೆಲೆಗೆ ಭತ್ತ ಮಾರಾಟ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್‍ಗೆ 2,500 ರೂಪಾಯಿಯಂತೆ ಖರೀದಿಸಬೇಕಾಗುತ್ತದೆ.
Advertisement
ಕೊಪ್ಪಳದ ಕಾರಟಗಿಯಲ್ಲಿ ಹಿಂದಿನ ಸರ್ಕಾರ ಘೋಷಿಸಿದ್ದ 27 ಕೋಟಿ ರೂ. ವೆಚ್ಚದ ರೈಸ್ ಟೆಕ್ನಾಲಜಿ ಪಾರ್ಕ್ ಅನ್ನು ಕೂಡಲೇ ನಿರ್ಮಿಸಬೇಕು. ಶುದ್ಧೀಕರಣ, ಸಂಸ್ಕರಣ, ಶೇಖರಣೆ, ಮಾರುಕಟ್ಟೆ ವ್ಯವಸ್ಥೆಗೆ ಹಣ ಖರ್ಚಾಗಿದೆ. ಆದರೆ ಪಾರ್ಕ್ ಮಾತ್ರ ನಿರ್ಮಾಣವಾಗಿಲ್ಲ. ಸರ್ಕಾರ ಭತ್ತ ಬೆಳೆಗಾರ ರೈತರನ್ನು ರಕ್ಷಿಸಲು ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.
ಅತೀವೃಷ್ಠಿ ಅನಾವೃಷ್ಠಿಗಳನ್ನು ಎದುರಿಸಿ ಉತ್ತಮ ಗುಣಮಟ್ಟದ ಭತ್ತದ ಬೆಳೆಯನ್ನು ಬೆಳೆದ ರೈತರು ಒಳ್ಳೆಯ ಬೆಲೆಯಿಲ್ಲದೆ ಕಂಗೆಟ್ಟಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದೆ. ಪ್ರೋತ್ಸಾಹ ಧನ ನೀಡಿ ರೈತರ ಕೈಹಿಡಿಯಬೇಕಿದೆ ಎಂದು ಚಾಮರಸ ಮಾಲೀಪಾಟೀಲ್ ಆಗ್ರಹಿಸಿದ್ದಾರೆ.