– 60ಕ್ಕೂ ಹೆಚ್ಚು ಜನ ಸಾರಿಗೆ ವ್ಯವಸ್ಥೆ, ಊಟ ಇಲ್ಲದೆ ಪರದಾಟ
ರಾಯಚೂರು: ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರದ ಪುಣೆಗೆ ಹೋಗಿದ್ದ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ತಾಂಡ ಸೇರಿ ಅಕ್ಕಪಕ್ಕದ ತಾಂಡಗಳ 60ಕ್ಕೂ ಹೆಚ್ಚು ಜನ ಸಾರಿಗೆ ವ್ಯವಸ್ಥೆಯಿಲ್ಲದೆ ರಾಜ್ಯಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶವೇ ಲಾಕ್ ಡೌನ್ ಆಗಿದ್ದಕ್ಕೆ ಮರಳುತ್ತಿರುವ ಕೂಲಿಕಾರರು, ಗ್ರಾಮಕ್ಕೆ ಬರಲು ವಾಹನ ವ್ಯವಸ್ಥೆ ಮಾಡಿಕೊಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕೆಲಸವಿಲ್ಲದ್ದಕ್ಕೆ ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಗಂಟು ಮೂಟೆಗಳೊಂದಿಗೆ ತಾಂಡಾಗಳಿಗೆ ಬರುತ್ತಿರುವ ಕೂಲಿಕಾರರು ಮಹಾರಾಷ್ಟ್ರದ ಸೊಲ್ಲಾಪುರದಿಂದ 40 ಕಿ.ಮೀ ದೂರದಲ್ಲೇ ಸದ್ಯ ಉಳಿದಿದ್ದಾರೆ. ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
Advertisement
Advertisement
ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಮುಖಂಡ ಸಿದ್ದು ಬಂಡಿಗೆ ವಾಹನ ವ್ಯವಸ್ಥೆ ಮಾಡಲು ಕೇಳಿಕೊಂಡಿರುವ ಜನ ವಿಡಿಯೋ ಸಂದೇಶ ಕಳುಹಿಸಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಆದರೆ ಇದುವರೆಗೂ ಗುಳೆ ಹೋದ ಕೂಲಿಕಾರರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸವಾಗಿಲ್ಲ. ಅಲ್ಲದೆ ಅಷ್ಟೂ ಜನರ ಆರೋಗ್ಯ ತಪಾಸಣೆ ನಡೆಯಬೇಕಿದೆ.