– ಕೊಪ್ಪಳದಲ್ಲಿ ಸಿಡಿಲು ಬಡಿದು 35 ಕುರಿಗಳು ಸಾವು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗಿದೆ. ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ಸಿಡಿಲಿಗೆ 35 ಕುರಿಗಳು ಬಲಿಯಾಗಿವೆ.
ಚಿಕ್ಕಬಳ್ಳಾಪುರ ತಾಲೂಕಿನಾದ್ಯಾಂತ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಮಂಚನಬಲೆಯ ಅಂಡರ್ ಪಾಸ್‌ನಲ್ಲಿ ವಾಹನ ಸವಾರರು ಪರದಾಡಿದರು. ತುಮಕೂರು ನಗರ ಸೇರಿದಂತೆ ಸುತ್ತಮುತ್ತ ಅರ್ಧ ತಾಸಿಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದೆ. ರಾಯಚೂರು ಗ್ರಾಮೀಣ ಭಾಗದಲ್ಲೂ ಗುಡುಗು-ಮಿಂಚು-ಬಿರುಗಾಳಿ ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ಹಿತವಾದ ವಾತಾವರಣ ಇತ್ತು. ಈ ಮಧ್ಯೆ, ಮತ್ತೊಂದು ಮಳೆಗಾಲ ಬರ್ತಿದ್ದರೂ ಕೂಡ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕಳಸದ ಹೆಬ್ಬಾಳೆ ಸೇತುವೆ ಕಾಮಗಾರಿ 2 ವರ್ಷಗಳಿಂದಲೂ ಪೂರ್ಣಗೊಂಡಿಲ್ಲ. ಹಾಗಾಗಿ, 3 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಆಗ್ತಿದೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ಆಲಿಕಲ್ಲು ಸುರಿದಿದೆ. ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರದಿದ್ದಾನೆ. ಬಾಗಲಕೋಟೆ, ಬೀಳಗಿ, ಹುಮಗುಂದ ಹಾಗೂ ಬಾದಾಮಿಯಲ್ಲಿ ಉತ್ತಮ ಮಳೆಯಾಗಿದೆ.
ಸಿಡಿಲಿಗೆ 35 ಕುರಿಗಳು ಸಾವು
ಕೊಪ್ಪಳದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿತ್ತು. ಇಂದು ಮತ್ತೆ ಮಳೆಯಾಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದಲ್ಲಿ ಸಿಡಿಲು ಬಡಿದು 35 ಕುರಿಗಳು ಸಾವನ್ನಪ್ಪಿವೆ. ಜಮೀನಿನಲ್ಲಿ ಮೇಯಲು ಕುರಿಗಳನ್ನು ಬಿಟ್ಟಿದ್ದಾಗ ಸಿಡಿಲು ಬಡಿದಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಆಗ್ರಹಿಸಿದ್ದಾರೆ.
ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಹಾಗೂ ಮರ್ಚಟಾಳ ಗ್ರಾಮದಲ್ಲಿ ಸಿಡಿಲು ಬಡಿದು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ತಾಲೂಕಿನ ಉಡಮಗಲ್ ಖಾನಾಪುರದಲ್ಲಿ ಸಿಡಿಲು ಬಡಿದು ಕುರಿಗಾಯಿ ಮಹಿಳೆ 50 ವರ್ಷದ ಮಲ್ಲಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ನೇರವಾಗಿ ತಲೆಗೆ ಸಿಡಿಲು ಹೊಡೆದು ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಮಹಿಳೆ ಸಾವಿಗೀಡಾಗಿದ್ದಾಳೆ. ಇನ್ನೊಂದೆಡೆ ರಾಯಚೂರು ತಾಲ್ಲೂಕಿನ ಮರ್ಚಟಾಳ ಗ್ರಾಮದಲ್ಲಿ ಸಿಡಿಲು ಬಡಿದು 46 ವರ್ಷದ ಹನುಮಂತ ಯಾದವ್ ಮೃತಪಟ್ಟಿದ್ದಾನೆ. ಮಧ್ಯಾಹ್ನ ವೇಳೆ ಏಕಾಏಕಿ ಗುಡಗು ಮಿಂಚು ಸಹಿತ ಅಕಾಲಿಕ ಮಳೆ ಸುರಿದಿದ್ದು, ಈ ವೇಳೆ ಸಿಡಿಲು ಬಡಿದು ತಾಲೂಕಿನಲ್ಲಿ ಇಬ್ಬರು ಅಸುನೀಗಿದ್ದಾರೆ. ಎರಡು ಪ್ರತ್ಯೇಕ ಘಟನಾ ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಧಾರಾಕಾರ ಮಳೆಯಾಗಿದೆ. ಭರ್ಜರಿ ಮಳೆಗೆ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ನಗರದ ಹೊಸಪೇಟೆ ಹಾಗೂ ಸಿರಗುಪ್ಪ ರಸ್ತೆಯಲ್ಲಿ ಮರಗಳು ಬಿದ್ದು, ಸಂಚಾರಕ್ಕೆ ತೊಡಕಾಯಿತು. ಬೆಂಗಳೂರು ರಸ್ತೆಯಲ್ಲಿ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತುಮಕೂರಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.