ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆ ರಾಯಚೂರಿನ ಕುಷ್ಟರೋಗಿಗಳ ಕಾಲೋನಿ ಜನಕ್ಕೆ ತುತ್ತು ಅನ್ನಕ್ಕೂ ಕಷ್ಟವಾಗಿದೆ. ಹೊರಗೆ ಭಿಕ್ಷೆ ಬೇಡಿ ಬದುಕುತ್ತಿದ್ದ ಜನರಿಗೆ ರಸ್ತೆಯಲ್ಲಿ ಜನರೇ ಇಲ್ಲದ ಕಾರಣಕ್ಕೆ ಭಿಕ್ಷೆಯೂ ಇಲ್ಲವಾಗಿದೆ.
ಮಾಶಾಸನ, ರೇಷನ್ ಯಾವುದೂ ಸಿಗದೆ ಇಲ್ಲಿನ ಕುಷ್ಟ ರೋಗಿಗಳು ಹಾಗೂ ಇಲ್ಲಿನ ನೂರಾರು ಜನ ನಿವಾಸಿಗಳು ಊಟಕ್ಕಾಗಿ ಪರದಾಡುತ್ತಿದ್ದಾರೆ. ಊಟ ಕೊಡಿ, ರೇಷನ್ ಕೊಡಿ ಎಂದು ಜಿಲ್ಲಾಡಳಿತಕ್ಕೆ ಇಲ್ಲಿನ ಜನ ಒತ್ತಾಯ ಮಾಡಿದ್ದಾರೆ. ಎಲ್ಲೆಡೆ ಪಡಿತರ ಆರಂಭವಾಗಿದ್ದರೂ ಇವರಿಗೆ ಇನ್ನೂ ಪಡಿತರ ನೀಡುತ್ತಿಲ್ಲ. ಒಂದು ವಾರದಿಂದ ನಮ್ಮ ಬಗ್ಗೆ ವಿಚಾರಿಸುವವರೇ ಇಲ್ಲದಾಗಿದೆ. ನಾವು ಬದುಕುವುದು ಹೇಗೆ ನಮಗೆ ಸಹಾಯ ಮಾಡಿ ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.
ಸರ್ಕಾರ ಇಲ್ಲಿನ ಕುಷ್ಟರೋಗಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಪ್ರತ್ಯೇಕ ಬಡಾವಣೆಯನ್ನೇ ಮಾಡಿದೆ. ಆದರೆ ಕೊರೊನಾ ವೈರಸ್ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಇಲ್ಲಿನ ನಿವಾಸಿಗಳಿಗೆ ಊಟವೇ ಸಿಗುತ್ತಿಲ್ಲ. ಯಾರಾದರೂ ದಾನಿಗಳು ತಂದುಕೊಟ್ಟರೆ ಮಾತ್ರ ಊಟ ಎನ್ನುವಂತ ಪರಿಸ್ಥಿತಿಯಲ್ಲಿದ್ದಾರೆ.