ರಾಯಚೂರು: ಜಿಲ್ಲೆಗೆ ಐಐಐಟಿ ಘೋಷಣೆಯಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ತರಗತಿಗಳು ಆರಂಭವಾಗುವುದು ಯಾವಾಗ, ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕ, ಅನುದಾನ ಬಿಡುಗಡೆ ಎಲ್ಲವೂ ಮರೀಚಿಕೆಯಾಗೆ ಉಳಿದಿದೆ.
ರಾಯಚೂರು ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ನಿಟ್ಟಿನಲ್ಲಿ ಐಐಟಿಗಾಗಿ ಐತಿಹಾಸಿಕ ಹೋರಾಟವನ್ನೇ ಜಿಲ್ಲೆಯ ಜನ ನಡೆಸಿದರು. ಆದರೆ ಐಐಟಿ ಸಿಗಲಿಲ್ಲ ಬದಲಾಗಿ ಮೂರು ವರ್ಷಗಳ ಕೆಳಗೆ ಐಐಐಟಿಯನ್ನು ರಾಯಚೂರಿಗೆ ಕೇಂದ್ರ ಸರ್ಕಾರ ಘೋಷಿಸಿತ್ತು. ಮೂರು ವರ್ಷ ಕಳೆದರೂ ರಾಯಚೂರಿನಲ್ಲಿ ತರಗತಿಗಳು ಆರಂಭವಾಗಿಲ್ಲ.
Advertisement
Advertisement
ಹೈದರಾಬಾದ್‍ನ ಕಾಂಡಿಯಾ ಐಐಟಿ ಕ್ಯಾಂಪಸ್‍ನಲ್ಲಿ ಬಿಟೆಕ್ ಆರಂಭಿಸಲಾಗಿದ್ದು, 35 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲಿ ರಾಯಚೂರು ಐಐಐಟಿಗಾಗಿ ವಿಶೇಷಾಧಿಕಾರಿಯನ್ನ ನೇಮಿಸಲಾಗಿದೆ. ಇದು ಬಿಟ್ಟರೆ ರಾಯಚೂರಿನಲ್ಲಿ ಯಾವುದೇ ಬೆಳವಣಿಗೆಗಳು ಚುರುಕಾಗಿ ನಡೆಯುತ್ತಿಲ್ಲ.
Advertisement
ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ವರ್ಷವೇ ತರಗತಿಗಳನ್ನು ಆರಂಭಿಸಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಅಲ್ಲದೆ ಹೆಚ್‍ಕೆಆರ್ ಡಿಬಿಯ ಎರಡು ಕೋಟಿ ಅನುದಾನದಲ್ಲಿ ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಎಂಜಿನಿಯರಿಂಗ್ ಕಾಲೇಜಿಗೆ ಒದಗಿಸಲು ರೂಪಿಸಲಾದ ಯೋಜನೆಯೂ ಪೂರ್ಣಗೊಂಡಿಲ್ಲ.
Advertisement
ಐಐಐಟಿ ಕ್ಯಾಂಪಸ್ ನಿರ್ಮಿಸಲು ಅಂತಿಮಗೊಳಿಸಿರುವ ರಾಯಚೂರು ತಾಲೂಕಿನ ವಡವಟ್ಟಿ ಸೀಮಾಂತರದ 65 ಎಕರೆ ಜಮೀನಿನಲ್ಲಿ ದಲಿತ ಕುಟುಂಬಗಳು ಬೇಸಾಯ ಮಾಡುತ್ತಿವೆ. 1978 -79ರಲ್ಲಿ ಸರ್ಕಾರದಿಂದಲೇ ಜಮೀನು ಪಡೆದು ಸುಮಾರು 10 ಕುಟುಂಬಗಳು 40 ಎಕರೆ ಪ್ರದೇಶದಲ್ಲಿ ಉಳುಮೆ ಮಾಡುತ್ತಿವೆ. ಈಗ ರೈತರಿಗೆ ತೋರಿಸಿರುವ ಭೂಮಿ ಕಲ್ಲು ಗುಡ್ಡಗಳಿಂದ ಕೂಡಿರುವುದರಿಂದ ರೈತರು ಜಮೀನುಗಳನ್ನ ಬಿಟ್ಟುಕೊಡಲ್ಲ ಅಂತ ಹಠ ಹಿಡಿದಿದ್ದಾರೆ. ಹೀಗಾಗಿ ಜಮೀನು ವಶಪಡಿಸಿಕೊಳ್ಳುವ ಪ್ರಕ್ರೀಯೆ ಇನ್ನೂ ಬಗೆಹರಿದಿಲ್ಲ. ಉನ್ನತ ಶಿಕ್ಷಣ ಸಚಿವ ಡಿಸಿಎಂ ಡಾ.ಅಶ್ವಥನಾರಾಯಣ ಅವರು ಇತ್ತೀಚೆಗೆ ರಾಯಚೂರಿಗೆ ಭೇಟಿ ನೀಡಿದಾಗ ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಏನೇ ಸಮಸ್ಯೆಗಳಿದ್ದರೂ ಮೊದಲು ರಾಯಚೂರಿನಲ್ಲೇ ಐಐಐಟಿ ತರಗತಿಗಳನ್ನು ಆರಂಭಿಸಿ, ಇನ್ನೊಂದೆಡೆ ಕಟ್ಟಡ, ಸಿಬ್ಬಂದಿ ನೇಮಕ ಸೇರಿದಂತೆ ಇತರ ಸೌಲಭ್ಯಗಳನ್ನ ಒದಗಿಸುವ ಕೆಲಸ ಪರ್ಯಾಯವಾಗಿ ಸಾಗಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.