ರಾಯಚೂರು: ರೋಗಿಗಳ ಆರೈಕೆಗೆ ದುಡ್ಡು ವಸೂಲಿ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದ ಘಟನೆ ರಾಯಚೂರಿನ ದೇವದುರ್ಗದ ಜಾಲಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಇಂಜಿಕ್ಷನ್ ಮಾಡಲು 50 ರೂಪಾಯಿ, ಉಚಿತ ಔಷಧಿ ನೀಡಲು ಸಹ ಹಣ ವಸೂಲಿ ಮಾಡುತ್ತಿದ್ದ ಹಿನ್ನೆಲೆ ರೋಗಿಗಳ ಕಡೆಯವರು ಜಗಳ ಮಾಡಿದ್ದಾರೆ. ಬಹಿರಂಗವಾಗಿ ಹಣ ವಸೂಲಿ ಮಾಡುತ್ತಿರುವ ನರ್ಸ್ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ರೋಗಿಗಳ ಗಲಾಟೆಗೆ ಸೊಪ್ಪು ಹಾಕದ ಸಿಬ್ಬಂದಿ ನಿಮ್ಮ ಹಣ ನೀವು ತೆಗೆದುಕೊಂಡು ಸುಮ್ಮನಿರಿ ಎಂದು ಗದರಿ, ಹಣ ವಾಪಸ್ ಕೊಟ್ಟಿದ್ದಾರೆ. ಇದನ್ನು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಿಸಿರುವ ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಹೊರಗಡೆ ಬರೆದುಕೊಡುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.