ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ತಿಳಿಯಲು ರಾಯಚೂರಿನ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ಮಲಗಿಹೋಗಿದ್ದೇ ಬಂತು. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಮಾತ್ರ ಬದಲಾಗಿಲ್ಲ.
ಡಾ. ವಿಶ್ವನಾಥ್ ಸಿಂಧನೂರಿನ ಬಾದರ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡಾಕ್ಟರ್ ದುಡ್ಡು ಕೊಡದಿದ್ದರೆ ಯಾವ ರೋಗಿಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ. ಸುಮಾರು 10 ವರ್ಷಗಳಿಂದ ಇಲ್ಲೇ ವೈದ್ಯರಾಗಿರುವ ಡಾ.ವಿಶ್ವನಾಥ್ ಈ ವಿಚಾರದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
Advertisement
Advertisement
ರೋಗಿಗಳು ಕಡಿಮೆ ಹಣ ಕೊಟ್ಟರೆ ಇಷ್ಟೇ ಕೊಡಬೇಕು ಎಂದು ಬೇಡಿಕೆ ಮಾಡಿ ರೋಗಿಗಳಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 200 ರೂಪಾಯಿಯಿಂದ ಒಂದೊಂದು ಚಿಕಿತ್ಸೆಗೆ ಒಂದೊಂದು ಫೀಸ್ ಅನ್ನು ಫಿಕ್ಸ್ ಮಾಡಿದ್ದಾರೆ. ಇದರ ಜೊತಗೆ ಒಮ್ಮೊಮ್ಮೆ ವಾರಗಟ್ಟಲೇ ಆಸ್ಪತ್ರೆಯ ಕಡೆ ಬಾರದೇ ಇದ್ದರೂ ಹಾಜರಾತಿಯಲ್ಲಿ ಮಾತ್ರ ಪ್ರತಿ ದಿನ ಹಾಜರಿ ಇರುತ್ತದೆ.
Advertisement
ಬಾದರ್ಲಿ ಸೇರಿದಂತೆ ಸುತ್ತಮುತ್ತಲ ಗಿಣಿವಾರ, ಒಳಬಳ್ಳಾರಿ, ಯದ್ಲಡ್ಡಿ, ಆರ್ ಎಚ್ ಕ್ಯಾಂಪ್ 5, ಅಲಬನೂರು, ಅರೆಕನೂರು ಗ್ರಾಮಗಳ ಜನ ಈ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.
Advertisement
ವೈದ್ಯನ ಹಣಬಾಕುತನಕ್ಕೆ ಬೇಸತ್ತು ಜನರೇ ತಮ್ಮ ಮೊಬೈಲ್ ನಲ್ಲಿ ಲಂಚಾವತಾರ ಸೆರೆ ಹಿಡಿದಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಗ್ರಾಮೀಣ ಭಾಗದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಇಲ್ಲೂ ಫೀಸ್ ಎಂದು ಈ ವೈದ್ಯ ಹಣ ಕೀಳುತ್ತಿದ್ದಾರೆ.
ಒಂದೆಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಅನ್ನೋ ಕೊರಗಿದ್ದರೆ ಇದ್ದ ವೈದ್ಯರಲ್ಲಿ ಇಂತಹವರು ರೋಗಿಗಳಿಂದ ಹಣ ವಸೂಲಿ ನಡೆಸಿದ್ದಾರೆ. ಒಂದು ವೇಳೆ ಈ ವೈದ್ಯನನ್ನ ಅಮಾನತು ಮಾಡಿದರೆ ಬೇರೆ ವೈದ್ಯರನ್ನ ನಿಯೋಜನೆ ಮಾಡ್ತಾರೋ ಇಲ್ವೋ ಅನ್ನೋ ಭಯ ಗ್ರಾಮಸ್ಥರಲ್ಲಿದೆ. ಕನಿಷ್ಠ ಈಗಲಾದರೂ ಮೇಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂತಹ ವೈದ್ಯರ ಕಡೆ ಗಮನಹರಿಸಬೇಕು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.