– ಕಂದಾಯ ಇಲಾಖೆ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿ
ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ಐದು ತಿಂಗಳಾದರೂ ನೆರೆಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ನೆರೆ ಸಂತ್ರಸ್ತರ ಹೆಸರಿನಲ್ಲಿ ಇನ್ಯಾರದೋ ಬ್ಯಾಂಕ್ ಖಾತೆಗಳಿಗೆ ಸಾವಿರಾರು ರೂಪಾಯಿ ಹಣ ಬಂದಿದೆ. ಅಧಿಕಾರಿಗಳ ವಂಚನೆಗೆ ಸಂತ್ರಸ್ತರು ಮಾತ್ರ ಮತ್ತೆ ಮತ್ತೆ ಸಂತ್ರಸ್ತರಾಗುತ್ತಿದ್ದಾರೆ.
ದೇವದುರ್ಗದ ಬೊಮ್ಮನಾಳ, ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದ ನೂರಾರು ಜನ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಲ್ಲಿ ವಂಚನೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷರ ವಂಚನೆಯಿಂದ ಪಹಣಿ, ಆಧಾರ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನೇ ಬದಲಿಸಿ ಬೇರೆಯವರ ಖಾತೆಗೆ ಹಣ ಜಮಾಮಾಡಿ ಡ್ರಾ ಮಾಡಿಕೊಳ್ಳಲಾಗಿದೆ. ನೆರೆಹಾವಳಿಗೆ ಸಂಬಂಧವೇ ಇಲ್ಲದ ಜಮೀನಿನ ರೈತರ ಖಾತೆಗೆ ಹಣ ಹಾಕಿ ಅಧಿಕಾರಿಗಳೇ ಡ್ರಾಮಾಡಿಕೊಂಡಿದ್ದಾರೆ. ಇದರಿಂದ ನಿಜವಾದ ಸಂತ್ರಸ್ತರಿಗೆ ವಂಚನೆಯಾಗಿದೆ. ಸರ್ಕಾರದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅಂತ ರೈತ ಮುಖಂಡ ವಾಸುದೇವ ಮೇಟಿ ಆರೋಪಿಸಿದ್ದಾರೆ.
Advertisement
Advertisement
ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದ 150 ರೈತರಿಗೆ ಮೋಸವಾಗಿದೆ. ರಾಯಚೂರಿನ ಎಚ್.ತಿಮ್ಮಾಪುರ ಗ್ರಾಮದಲ್ಲೂ ಸಾಕಷ್ಟು ರೈತರಿಗೆ ವಂಚನೆಯಾಗಿದ್ದು, ಈಗ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5400 ಜನ ರೈತರು ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದು 18 ಜನರಿಗೆ ಮಾತ್ರ ಜಿಲ್ಲಾಡಳಿತ ದಾಖಲೆ ಕೊರತೆಯಿಂದ ಹಣ ಜಮಾ ಮಾಡಿಲ್ಲ. ಆದರೆ ಅಧಿಕಾರಿಗಳ ಗೋಲ್ ಮಾಲ್ ನಿಂದ ಕಂಡಕಂಡವರ ಖಾತೆಗೆ ಹಣಹೋಗಿದ್ದು ದುರುಪಯೋಗ ಮಾಡಿಕೊಳ್ಳಲಾಗಿದೆ. ರೈತರಿಗಾದ ವಂಚನೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Advertisement
ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರದ ಹಣದ ಮೇಲೂ ಭ್ರಷ್ಟ ಅಧಿಕಾರಿಗಳು ಕಣ್ಣಾಕಿರುವುದು ದುರಂತ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನ ಕೂಡಲೇ ಒದಗಿಸಬೇಕಿದೆ.