ಜಮೀನಿಗಾಗಿ ಸಹೋದರರ ಹೊಡೆದಾಟ – ತಮ್ಮನ ಕೊಲೆಯಲ್ಲಿ ಅಂತ್ಯ

Public TV
1 Min Read
Raichur Crime

– ಐವರು ಅರೋಪಿಗಳ ಬಂಧನ

ರಾಯಚೂರು: ಜಮೀನಿನ ವಿಚಾರಕ್ಕೆ ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಕಿರಿಯ ಸಹೋದರ ಭೀಕರವಾಗಿ ಕೊಲೆಯಾಗಿರುವ ಘಟನೆ ಮಾನ್ವಿಯ (Manvi) ಜಿನೂರಿನಲ್ಲಿ ನಡೆದಿದೆ.

ರಾಮಣ್ಣ (36) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ರಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಗಲಾಟೆಯಲ್ಲಿ ಮೃತನ ಪತ್ನಿ ರತ್ನಮ್ಮ ಹಾಗೂ ಅಕ್ಕ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಗ್ರಾಮದಲ್ಲಿದ್ದ 2 ಎಕರೆ 10 ಗುಂಟೆ ಜಮೀನನ್ನು ರಾಮಣ್ಣ ತನ್ನ ಉಳಿದ ಸಹೋದರರಿಗೆ ಬಿಡದೆ ತಾನೇ ಉಳುಮೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ರಾಮಣ್ಣನ ಅಣ್ಣಂದಿರಾದ ಮೂಕಯ್ಯ, ಮುದಕಯ್ಯ ಹಾಗೂ ಅವರ ಮಕ್ಕಳು ಸೇರಿಕೊಂಡು ರಾಮಣ್ಣನ ಮೇಲೆ ಗಲಾಟೆ ಮಾಡಿದ್ದಾರೆ. ಬಳಿಕ ಕೊಡಲಿ ಮತ್ತು ಬೆತ್ತದಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರೆ. ಇದರ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ರಾಮಣ್ಣ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಾನ್ವಿ ಪೊಲೀಸ್ (Manvi Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article