ರಾಯಚೂರು: ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಈಗಾಗಲೆ ತಾಲೂಕುಗಳಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲು ಆದೇಶಿಸಿದ್ದರೂ ಸೊಸೈಟಿಯವರು ಆನ್‍ಲೈನ್ ಕೇಂದ್ರಗಳನ್ನ ಪ್ರಾರಂಭಿಸುತ್ತಿಲ್ಲ. ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನ ಸ್ಥಾಪಿಸಿ ರೈತರ ತೊಗರಿಯನ್ನ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದರು.
ಕರ್ನಾಟಕ ನೇಗಿಲಯೋಗಿ ರೈತ ಸಂಘದ ನೇತೃತ್ವದಲ್ಲಿ ಲಿಂಗಸುಗೂರು ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ ಡಿಸಿಎಂ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಜನವರಿ 1ರಿಂದ ಬೆಲೆ ಕುಸಿತವಾದ ಎಲ್ಲಾ ಬೆಳೆಗಳ ಖರೀದಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಯಾವ ಪ್ರಕ್ರಿಯೆಗಳು ಆರಂಭವಾಗಿಲ್ಲ. ಕೂಡಲೇ ಕ್ರಮವಹಿಸಬೇಕು ಅಂತ ರೈತರು ಒತ್ತಾಯಿಸಿದರು.
ಲಿಂಗಸುಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು, ಎಪಿಎಂಸಿಗಳನ್ನ ಕೃಷಿಯೇತರ ವ್ಯಾಪಾರಗಳನ್ನು ಮಾಡುವವರ ವಿರುದ್ಧ ಕ್ರಮ, ಫಸಲ್ ಭೀಮಾ ಯೋಜನೆ ಸಮರ್ಪಕ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.