-ಎಕರೆಗೆ 30 ಸಾವಿರ ರೂಪಾಯಿ ನಷ್ಟ
-ಮಳೆ, ನೀರಿಲ್ಲದೆ ಇಳುವರಿ ಕುಂಠಿತ
ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ ಹೊಡೆತ ನೀಡಿದೆ. ಪ್ರತಿಯೊಬ್ಬ ರೈತ ಕೂಡ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಬೀದಿಗೆ ಬಂದಿದ್ದಾನೆ.
Advertisement
ರಾಯಚೂರು ಜಿಲ್ಲೆಯ ಜೀವಜಲದ ಮೂಲಗಳಾದ ತುಂಗಾಭದ್ರ, ಕೃಷ್ಣ ನದಿಗಳು ಈಗ ರೈತರನ್ನ ಕೈ ಬಿಟ್ಟಿವೆ. ಇನ್ನು ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಹೀಗಾಗಿ ಜಿಲ್ಲೆಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ನೀರಿಲ್ಲದೆ ಇಳುವರಿ ಕುಗ್ಗಿದೆ. ಪ್ರತೀ ವರ್ಷ ಎಕರೆಗೆ 25 ರಿಂದ 30 ಕ್ವಿಂಟಾಲ್‍ನಷ್ಟು ಬರುತ್ತಿದ್ದ ಬೆಳೆ ಈ ವರ್ಷ ಕೇವಲ 10 ರಿಂದ 13 ಕ್ವಿಂಟಾಲ್ ಬಂದಿದೆ. ಅಲ್ಲಿಗೆ ಎಕರೆಗೆ ಒಂದು ಲಕ್ಷದ ರೂ.ವರೆಗೆ ಖರ್ಚು ಮಾಡಿರುವ ರೈತರಿಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ.
Advertisement
Advertisement
ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ರಿಂದ 5 ಸಾವಿರ ರೂಪಾಯಿಯಿದೆ. ಅಂದ್ರೆ ಪ್ರತಿ ಕ್ವಿಂಟಾಲ್‍ಗೆ ಸುಮಾರು 7 ಸಾವಿರ ರೂಪಾಯಿ ಇಳಿದಿದೆ. ಒಂದೆಡೆ ಮಳೆ ಕೈಕೊಟ್ಟರೆ, ಮತ್ತೊಂದೆಡೆ ಬೋರ್‍ವೆಲ್‍ನಿಂದ ನೀರು ಹಾಯಿಸಲು ರೈತರಿಗೆ ವಿದ್ಯುತ್ ಸಮಸ್ಯೆ ಕೂಡ ಇದೆ.
Advertisement
ಕಳೆದ ಎಂಟತ್ತು ವರ್ಷಗಳಲ್ಲಿ ಅನುಭವಿಸದ ನಷ್ಟವನ್ನ ಮೆಣಸಿನಕಾಯಿ ಬೆಳೆಗಾರರು ಈ ವರ್ಷ ಅನುಭವಿಸಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಿಸಿಲ್ಲ. ಅಲ್ಲದೆ ಇತ್ತೀಚಿಗೆ ಸುರಿದ ಮಳೆಗೆ ಒಣಗಲು ಬಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಹೀಗಾಗಿ ಮೆಣಸಿನಕಾಯಿ ಸಂಗ್ರಹಕ್ಕೆ ಗೋದಾಮುಗಳ ವ್ಯವಸ್ಥೆ ಮಾಡಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಒಟ್ನಲ್ಲಿ, ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಲಾಭದ ನಿರೀಕ್ಷೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರು ಭಾರೀ ನಷ್ಟವನ್ನೇ ಅನುಭವಿಸಿದ್ದಾರೆ. ಈಗಲಾದ್ರೂ ಸರ್ಕಾರ ರೈತರ ಕಡೆ ಗಮನಹರಿಸಬೇಕಿದೆ.