ರಾಯಚೂರು: ಕೃಷಿ ಹೊಂಡ ಕಳೆದುಹೋಗಿದೆ ಹುಡುಕಿಕೊಡಿ ಎಂದು ರಾಯಚೂರಿನ ಸಿರವಾರ ತಾಲೂಕಿನ ಹಿರೇಹಣಗಿ ಗ್ರಾಮದ ರೈತರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ರೈತ ಪ್ರವೀಣಕುಮಾರ್ ತನ್ನ ಜಮೀನಿನಲ್ಲಿರುವ ಕೃಷಿಹೊಂಡ ಹುಡುಕಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದಾಖಲೆಗಳ ಪ್ರಕಾರ ತನ್ನ ತಂದೆ ವೀರನಗೌಡ ಹೆಸರಿನಲ್ಲಿರುವ ಸರ್ವೆ ನಂ.3ಎ 6 ಎಕರೆ ಬೀಳುಬಿದ್ದ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣವಾಗಿದೆ. ಆದರೆ ಜಮೀನಿನಲ್ಲಿ ಕೃಷಿ ಹೊಂಡ ಇಲ್ಲ. ಹೀಗಾಗಿ ಕೃಷಿ ಹೊಂಡ ಹುಡುಕಿಕೊಡಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ಫೆಬ್ರವರಿ 2019 ರಲ್ಲಿ 14 ಜನ ಕೂಲಿ ಕಾರ್ಮಿಕರ ಹೆಸರಿನಲ್ಲಿ 41,860 ರೂಪಾಯಿ ಹಣ ಬಿಡುಗಡೆಯಾಗಿದೆ. ಆದರೆ ಜಮೀನಿನಲ್ಲಿ ಕೃಷಿಹೊಂಡ ಮಾತ್ರ ನಿರ್ಮಾಣ ಮಾಡಿಲ್ಲ. ಕೃಷಿಹೊಂಡಕ್ಕಾಗಿ ರೈತ ಅರ್ಜಿಹಾಕದಿದ್ದರು ಅವರ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಬಿಲ್ ಮಂಜೂರು ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹೇಶ್ ದಾಖಲೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ ಎಂದು ರೈತ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
Advertisement
ಪಂಚಾಯ್ತಿ ಅಧಿಕಾರಿಗಳು ಕೇವಲ ದಾಖಲೆಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸ್ಥಳ ಪರಿಶೀಲಿಸದೆ ಬೇರೆಡೆ ಕೃಷಿ ಹೊಂಡ ನಿರ್ಮಿಸಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕೃಷಿಹೊಂಡ ನಿರ್ಮಾಣದ ಬಗ್ಗೆ ವರದಿ ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿರುವ ಜಿಪಂ ಸಿಇಓ ಲಕ್ಷ್ಮಿಕಾಂತ್ ರೆಡ್ಡಿ ವರದಿ ಬಂದ ಬಳಿಕ ಕ್ರಮ ಕೈಗೊಳುವುದಾಗಿ ಹೇಳಿದ್ದಾರೆ.
Advertisement
ರೈತರ ಹೆಸರಲ್ಲಿ ಅಧಿಕಾರಿಗಳು ಅನುದಾನ ನುಂಗಿಹಾಕಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ. ಹೀಗಾಗಿ ಅಧಿಕಾರಿಗಳ ಅಕ್ರಮ ಬಯಲಿಗೆಳೆಯಲು ರೈತ ನನ್ನ ಜಮೀನಿನಲ್ಲಿರುವ ಕೃಷಿ ಹೊಂಡ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.