– ನಾಳೆವರೆಗೂ ನಿಷೇಧಾಜ್ಞೆ ಜಾರಿ
ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣ ಉದ್ವಿಗ್ನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ನೋವು ಉಂಟು ಮಾಡುವ ಪೊಸ್ಟ್ ಪ್ರಕರಣ ಸಂಬಂಧ ಇದೀಗ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಫೇಸ್‍ಬುಕ್‍ನಲ್ಲಿ ವಾಲ್ಮೀಕಿ, ಶಿವಾಜಿ, ಸಂಗೊಳ್ಳಿ ರಾಯಣ್ಣ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದನ್ನು ಕಂಡು ಹಿಂದೂ ಪರ ಸಂಘಟನೆಗಳು ರೊಚ್ಚಿಗೆದ್ದು ಲಿಂಗಸುಗೂರು ಪಟ್ಟಣ ಪೊಲೀಸ್ ಠಾಣೆ ಎದರು ಪ್ರತಿಭಟನೆ ನಡೆಸಿದರು. ಅಲ್ಲದೆ ಟೈರ್ ಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದರು.
ಈ ವೇಳೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತು. ಪರಿಣಾಮ ಪೊಲೀಸ್ ಜೀಪ್ ಜಖಂ ಆಗಿ ಐವರು ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ಹಲವರನ್ನು ಬಂಧಿಸಿದರು. ಬಂಧನದ ಬಳಿಕವೂ ಗಲಾಟೆ ಮುಂದುವರಿಯಿತು. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಪಟ್ಟಣದಲ್ಲಿ ಬಸ್ ಓಡಾಟ ಸ್ಥಗಿತಗೊಂಡಿದ್ದು, ಬದಲಿ ಮಾರ್ಗಗಳ ಮುಖಾಂತರ ಬಸ್ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ.