ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿರುವುದು ಎಣ್ಣೆ ಪ್ರಿಯರನ್ನ ಚಡಪಡಿಸುವಂತೆ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಆನ್‍ಲೈನ್ ವಂಚನೆಗೆ ಮುಂದಾಗಿದ್ದಾರೆ. ಎಲ್ಲಿ ಹೇಳಿದ್ರೂ ಮದ್ಯವನ್ನು ಹೋಂ ಡೆಲಿವರಿ ಮಾಡುತ್ತೇವೆ ಅಂತ ಜಾಹೀರಾತು ಹಾಕಿಕೊಂಡಿದ್ದಾರೆ. ಇದನ್ನು ನಂಬಿ ಅವರ ಖಾತೆಗೆ ಹಣ ಹಾಕಿದ್ರೆ ಪಂಗನಾಮ ಗ್ಯಾರಂಟಿ.
ರಾಯಚೂರಿನ ಅಮೃತ ವೈನ್‍ಶಾಪ್‍ನಿಂದ ಎಲ್ಲಾ ಬ್ರಾಂಡ್‍ನ ಮದ್ಯ ಹೋಂ ಡೆಲಿವರಿ ಇದೆ. ನಗರದ ಕೆ.ಇ.ಬಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಅಂತ ವಿಳಾಸವನ್ನ ಹಾಕಿ ಮೊಬೈಲ್ ಸಂಖ್ಯೆಯನ್ನೂ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಹಾಕಿದ್ದಾರೆ. ಆ ಮೊಬೈಲ್ ಸಂಖ್ಯೆಗೆ ಕರೆಮಾಡಿದರೆ ಹಿಂದಿಯಲ್ಲಿ ಮಾತನಾಡುವ ವಂಚಕರು ಫೋನ್ ಪೇ ಮೂಲಕ ಹಣ ಹಾಕಿ, ಹಣ ಬಂದ ಮೇಲೆ ಮದ್ಯ ತಂದುಕೊಡುತ್ತೇವೆ ಎನ್ನುತ್ತಾರೆ.
Advertisement
Advertisement
ಡೆಲಿವರಿ ಚಾರ್ಜ್ ಮಾತ್ರ ತೆಗೆದುಕೊಳ್ಳುತ್ತೇವೆ. ಹೆಚ್ಚುವರಿ ಹಣ ಕೇಳಲ್ಲ. ಮೊದಲು ಹಣ ಹಾಕಿ ಎಂದು ನಂಬಿಸುತ್ತಾರೆ. ಹೆಚ್ಚಿಗೆ ಪ್ರಶ್ನೆ ಕೇಳಿದ್ರೆ ಅಲ್ಲಿಗೆ ಫೋನ್ ಕಟ್ ಮಾಡುತ್ತಾರೆ. ಒಂದು ವೇಳೆ ನೀವು ಹೆಚ್ಚು ಆಸಕ್ತಿ ತೋರಿದರೆ ಹಣ ಹಾಕುವಂತೆ ಮತ್ತೆ ಮತ್ತೆ ಕರೆ ಮಾಡುತ್ತಾರೆ.
Advertisement
ಅಸಲಿಗೆ ರಾಯಚೂರಿನ ಕೆ.ಇ.ಬಿ. ಕಾಲೋನಿಯಲ್ಲಾಗಲಿ, ನಿಜಲಿಂಗಪ್ಪ ಕಾಲೋನಿಯಲ್ಲಾಗಲಿ, ಅಮೃತ ವೈನ್ಸ್ ಹೆಸರಿನ ಮದ್ಯದ ಅಂಗಡಿಯಿಲ್ಲ. ಜಾಹೀರಾತಿಗೆ ಹಾಕಿದ ಫೋಟೋಗಳು ಸಹ ರಾಯಚೂರಿನದ್ದು ಅಲ್ಲಾ ಎಂದು ಅಬಕಾರಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಫೇಸ್‍ಬುಕ್ ಜಾಹೀರಾತು ಮೂಲಕ ಮದ್ಯ ಪ್ರಿಯರಿಗೆ ವಂಚಿಸಲು ಮುಂದಾಗಿರುವ ವಂಚಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.