ರಾಯಚೂರು: ಕೊರೊನಾ ತಡೆಗಾಗಿ ಲಾಕ್‍ಡೌನ್ ಜಾರಿಮಾಡಿದ ಹಿನ್ನೆಲೆ ಕೂಲಿಕಾರ್ಮಿಕರಿಗೆ ಉದ್ಯೋಗವಿಲ್ಲದೆ ಕುಳಿತಿದ್ದರು. ಆದರೆ ಈಗ ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಕೊರೊನಾ ಭೀತಿಯ ಮಧ್ಯೆಯೂ ರಾಯಚೂರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನ ಆರಂಭಿಸಲಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಪ್ಪುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಪನಾಳ ಕೆರೆ ಹೂಳೆತ್ತೆವ ಕಾಮಗಾರಿಯನ್ನು ಆರಂಭ ಮಾಡಲಾಗಿದೆ. ಒಟ್ಟು 115 ಜನ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದ್ದು, ಕಾಮಗಾರಿ ಆರಂಭದ ಮುನ್ನ ಕೂಲಿಕಾರ್ಮಿಕರಿಂದ ಜ್ವರ-ಕೆಮ್ಮು-ನೆಗಡಿ ಬಂದವರು ಕೆಲಸಕ್ಕೆ ಬರುವುದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೂಲಿಕಾರ್ಮಿಕರಿಗೆ ಕೆಲಸ ಸಿಕ್ಕಿದ್ದು ಸಮಾಧಾನಕರವಾಗಿದೆ. ಆದರೆ ಕಾಮಗಾರಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದ್ದು, ಜಿಲ್ಲಾ ಪಂಚಾಯ್ತಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆ ಗ್ರೀನ್ ಝೋನ್‍ನಲ್ಲಿರುವುದರಿಂದ ಜನರ ಓಡಾಟ ಹೆಚ್ಚಾಗಿದ್ದು, ಬಹಳಷ್ಟು ಅಂಗಡಿಗಳನ್ನ ತೆರೆಯಲಾಗಿದೆ. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಕೃಷಿ ಪರಿಕರ, ಉಪಕರಣಗಳು, ರಸಗೊಬ್ಬರ, ಬೀಜದ ಅಂಗಡಿಗಳನ್ನ ತೆರೆಯಲಾಗಿದೆ. ಕೃಷಿ ಚಟುವಟಿಕೆಗಾಗಿ ಹೊರಬರುವ ರೈತರಿಗೆ ಪಾಸ್‍ಗಳ ವಿನಾಯಿತಿ ನೀಡಲಾಗಿದೆ. ಸ್ಥಳೀಯ ಕೂಲಿ ಕೆಲಸಗಾರರು, ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.