– ವಿದ್ಯುತ್ ತಂತಿ ಕಿಡಿಯಿಂದ ಅವಘಡ
ರಾಯಚೂರು: ನಗರ ಹೊರವಲಯದ ಮನ್ಸಾಲಾಪುರ ರಸ್ತೆಯಲ್ಲಿ ವಿದ್ಯುತ್ ತಂತಿಯ ಕಿಡಿ ತಗುಲಿ ಹತ್ತಿ ಎಣ್ಣೆ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಬೀಜ ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿವೆ.
ನರೇಂದ್ರಬಾಬು ಎಂಬವರಿಗೆ ಸೇರಿದ ಶ್ರೀ ಲಕ್ಷ್ಮಿ ವೆಂಕಟಾದ್ರಿ ಆಗ್ರೊ ಫುಡ್ಸ್ ಹತ್ತಿ ಎಣ್ಣೆ ಘಟಕದಲ್ಲಿ ಬೆಂಕಿ ಅವಘಡ ನಡೆದಿದೆ. ವಿದ್ಯುತ್ ಪ್ರಸರಣದ ವೈರ್ ನಿಂದ ಕಿಡಿ ಹೊತ್ತಿಕೊಂಡು ಅವಘಡ ಉಂಟಾಗಿದೆ. ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುಮಾರು 522 ಟನ್ ಹತ್ತಿ ಕಾಳು ಶೇಖರಣೆ ಮಾಡಲಾಗಿತ್ತು. ಹತ್ತಿ ಎಣ್ಣೆ ತಯಾರಿಕೆ ಘಟಕಕ್ಕೆ ಬೆಂಕಿ ಬಿದ್ದಿದ್ದರಿಂದ ಸಂಪೂರ್ಣ ಭಸ್ಮವಾಗಿದೆ. ಮೂರು ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.