– ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ವೈದ್ಯರ ಮಹಾ ನಿರ್ಲಕ್ಷ್ಯ
– ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿ ಬುಧವಾರ ನಿಗದಿಯಾಗಿದ್ದರೂ ಬೇಜವಾಬ್ದಾರಿ
ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ವೈದ್ಯಕೀಯ ಸೇವೆ ಹಳ್ಳ ಹಿಡಿದಿದೆ. ರಾಯಚೂರಿನಲ್ಲಿ ವೈದ್ಯರಿಗೆ ಬಾಣಂತಿಯರು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದೇ ಅಮಾನವೀಯತೆ ಮೆರೆದಿದ್ದಾರೆ. ಪುಟ್ಟ ಕಂದಮ್ಮಗಳೊಂದಿಗೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯುತ್ತ ಕುಳಿತ ಬಾಣಂತಿಯರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.
ರಾಯಚೂರು ನಗರದಲ್ಲಿರುವ ನಗರ ಪ್ರಸೂತಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಮೊದಲು ಬಾಣಂತಿಯರಿಗೆ ಶಸ್ತ್ರ ಚಿಕಿತ್ಸೆಗಾಗಿ ಸಮಯ ನಿಗಿದಿ ಮಾಡದೆ ಇರುವುದರಿಂದ ಪ್ರತಿವಾರ ನೂರಾರು ಬಾಣಂತಿಯರು ಶಸ್ತ್ರ ಚಿಕಿತ್ಸೆಗೆ ಬರುತ್ತಿದ್ದರು. ವಾರದಲ್ಲಿ ಕೇವಲ 30 ಜನರಿಗೆ ಮಾತ್ರ ಆಪರೇಷನ್ ಮಾಡುವದರಿಂದ ಉಳಿದವರು ವಾಪಸ್ ಆಗುತ್ತಿದ್ದರು. ಆಗಲು ಬಾಣಂತಿಯರ ಕಷ್ಟ ಹೇಳತೀರದಾಗಿತ್ತು. ಆ ನಂತರ ಪ್ರತಿ ವಾರ ಆಪರೇಷನ್ ಮಾಡಿಸಿಕೊಳ್ಳಲು ಬರುವವರಿಗೆ ಆಶಾ ಕಾರ್ಯಕರ್ತೆಯರ ಮುಖಾಂತರ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಈ ಬುಧವಾರ ರಾಯಚೂರು ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದ 30 ಬಾಣಂತಿಯರು ಪರದಾಡುವಂತಾಗಿತ್ತು.
ಶಸ್ತ್ರ ಚಿಕಿತ್ಸೆಗಾಗಿ ಬರುವ ತಾಯಂದಿರುವ ಏನು ತಿನ್ನದೆ ಬರಬೇಕು. ಅದರಂತೆ ಬೆಳಗ್ಗೆ ಗಂಟೆಗೆ ಬಂದ ಬಾಣಂತಿಯರಿಗೆ ಆಪರೇಷನ್ ಮಾಡಲು ವೈದ್ಯರು ಬರಲೇ ಇಲ್ಲ. ಇದರಿಂದ ಹಸಿವಿನಿಂದ ಬಾಣಂತಿಯರು ಹಾಗೂ ಶಿಶುಗಳು ಪರದಾಡುವಂತಾಯಿತು. ಆಸ್ಪತ್ರೆಯ ಹೊರಗಡೆ ಟಿನ್ ಶೆಡ್‍ಗೆ, ಮರ ಗಿಡಗಳಿಗೆ ಸೀರೆ ಕಟ್ಟಿಕೊಂಡು ಮಕ್ಕಳನ್ನು ಮಲಗಿಸಬೇಕಾದ ಪರಸ್ಥಿತಿ ಎದುರಿಸಿದ್ದಾರೆ. ಆಸ್ಪತ್ರೆಯಲ್ಲಿ ಕೇಳಿದರೆ ಸಿಬ್ಬಂದಿ ಆಪರೇಷನ್ ಮಾಡುವ ವೈದ್ಯರು ಬಂದಿಲ್ಲ ಅಂತ ಹೇಳಿ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಸಂಜೆ ವೇಳೆ ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಓರ್ವ ವೈದ್ಯ ಬಂದಿದ್ದಾರೆ. ಆದರೆ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಿ ಉಳಿದವರನ್ನ ವಾಪಸ್ ಕಳುಹಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಾಗ ಶಸ್ತ್ರ ಚಿಕಿತ್ಸೆ ಮಾಡುವ ರಿಮ್ಸ್ ವೈದ್ಯ ಶಾಹ ಆಲಂ ಅವರನ್ನು ಸಂಪರ್ಕಿಸಿ ಕಳುಹಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ವೈದ್ಯರು ಕೊನೆಯ ಗಳಿಗೆಯಲ್ಲಿ ಬೇರೆ ಕೆಲಸವಿದೆ ಅಂತ ಆಸ್ಪತ್ರೆಗೆ ಬಂದಿಲ್ಲ. ಮತ್ತೊಬ್ಬ ವೈದ್ಯರನ್ನಾದರೂ ನೇಮಿಸಬೇಕಾದ ತಾಲೂಕು ವೈದ್ಯಾಧಿಕಾರಿ ಡಾ.ಶಾಕೀರ್ ಪ್ರತಿಬಾರಿಯಂತೆ ಈ ಬಾರಿಯೂ ನಿರ್ಲಕ್ಷ್ಯ ಮೆರೆದಿದ್ದಾರೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ.
ಆರೋಗ್ಯ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ಪದೇ ಪದೇ ಇಂತಹ ಘಟನೆಗಳು ಮರುಕಳುಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಕೆಲಸ ಮಾಡಬೇಕಿದೆ. ಬಾಣಂತಿಯರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.