ರಾಯಚೂರು: ನೆರೆ ಹಾವಳಿ ಸಂದರ್ಭದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಹ ಇಳಿದ ಬಳಿಕ ನಿರಾಶ್ರಿತರ ಕೇಂದ್ರಗಳಲ್ಲಿನ ದಾಸ್ತಾನು ಲೆಕ್ಕವನ್ನ ಕಂದಾಯ ಇಲಾಖೆ ಅಧಿಕಾರಿಗಳು ನೋಡಿಕೊಂಡಿದ್ದರು. ಇಷ್ಟಾದರೂ ಇಲ್ಲಿಯವರೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಗಂಜಿ ಕೇಂದ್ರ ತೆರೆದಿದ್ದ ಕನ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ 70 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು ಅಕ್ರಮದ ವಾಸನೆ ಹರಡಿದೆ.
ಶಾಲೆಯ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್ ನಿರಾಶ್ರಿತರ ಕೇಂದ್ರದ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ ಎಂದು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಶಾಲೆಯಲ್ಲಿ ಉಳಿದಿದ್ದ ದಾಸ್ತಾನು ಬಿಸಿಯೂಟದ್ದು ಅಂತ ಹೇಳಿಕೊಂಡು ಬಂದಿದ್ದಾರೆ. ಸ್ಥಳೀಯರು ದಾಸ್ತಾನಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ರಾತ್ರೋರಾತ್ರಿ 60 ಕ್ವಿಂಟಾಲ್ ಅಕ್ಕಿಯನ್ನ ಬೇರೆಡೆ ಸ್ಥಳಾಂತರಿಸಿ 10 ಕ್ವಿಂಟಾಲ್ ಮಾತ್ರ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
Advertisement
ನಿರಾಶ್ರಿತರ ಕೇಂದ್ರಕ್ಕೆ ದಾನಿಗಳು ನೀಡಿದ ವಸ್ತುಗಳು ಸಹ ಇದೇ ರೀತಿ ದುರ್ಬಳಕೆಯಾಗಿವೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.