ರಾಯಚೂರು: ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಅಥವಾ ಗೊಂದಲ ಎಲ್ಲಾ ಸುಳ್ಳು. ಯಾವ ಸಚಿವರಲ್ಲೂ ಗೊಂದಲ ಇಲ್ಲ. ಊಹಾಪೋಹ ಅಷ್ಟೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಕೃಷಿ ಮೇಳ ಉದ್ಘಾಟನೆಗೆ ಆಗಮಿಸಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಪೌರತ್ವ ಕಾಯ್ದೆ ಜಾರಿಗೆ ಬಂದಾಗಿದೆ. ಇದರಿಂದ ಯಾವ ಸಮುದಾಯಕ್ಕೆ ತೊಂದರೆ ಆಗದು. ಕೆಲವರು ಜನರ ದಾರಿ ತಪ್ಪಿಸಿ ಗೊಂದಲ ಮೂಡಿಸುತ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದರು.
ರೈತರ ಆತ್ಮಹತ್ಯೆಯ ಪ್ರಕರಣಗಳು ತಗ್ಗಿಸುವ ಬಗ್ಗೆ ರೈತರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ನೆರೆಯಿಂದ ಹಾಳಾದ ಬೆಳೆ ಹಾಗೂ ಮನೆಗಳ ಹಾನಿಗೆ ಕೇಂದ್ರದ 2 ನೇ ಹಂತದ ಪರಿಹಾರ ಬಂದಾಕ್ಷಣ ಉಳಿದವರಿಗೆ ಜಮೆ ಮಾಡಲಾಗುವುದು. ಬೆಳೆ ವಿಮೆ ಪರಿಹಾರಕ್ಕೆ ವಿಮಾ ಕಂಪನಿಗಳಿಂದ ಲಂಚದ ಬೇಡಿಕೆ ಆರೋಪ ಸುಳ್ಳು ಅಂತ ತಳ್ಳಿಹಾಕಿದ ಅವರು, ಬೇಗ ಪರಿಹಾರದ ವಿತರಣೆಗೆ ಸಭೆ ಮಾಡಿ ಸೂಚನೆ ನೀಡಲಾಗಿದೆ ಎಂದರು.
ಇನ್ನೂ ಸಾರಿಗೆ ಇಲಾಖೆಯಿಂದ 1,200 ಹೊಸ ಬಸ್ ಖರೀದಿಗೆ ಚಿಂತನೆ ಮಾಡಲಾಗುತ್ತದೆ ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದರು. ಇದಕ್ಕೂ ಮುನ್ನ ಮಂತ್ರಾಲಯಕ್ಕೆ ತೆರಳಿದ ಸಚಿವ ಲಕ್ಷ್ಮಣ ಸವದಿ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಲಕ್ಷ್ಮಣ ಸವದಿಗೆ ಸಚಿವ ಪ್ರಭು ಚವ್ಹಾಣ್ ಸೇರಿ ಹಲವಾರು ಮುಖಂಡರು ಸಾಥ್ ನೀಡಿದರು.