ರಾಯಚೂರು: ಮೂರು ದಿನಗಳ ಕಾಲ ರಾಯಚೂರಿನಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಇಂದು ಅದ್ಧೂರಿ ತೆರೆ ಎಳೆಯಲಾಯಿತು. ಎತ್ತುಗಳ ಸ್ಪರ್ಧೆ, ಮೆರವಣಿಗೆ, ವಿವಿಧ ತಂಡಗಳ ಕಲಾ ಪ್ರದರ್ಶನದಿಂದ ಅಕ್ಷರಶ: ನಗರದಲ್ಲಿ ಜಾನಪದ ಲೋಕವೇ ಧರೆಗಿಳಿದಿತ್ತು.
ಈ ಹಬ್ಬದ ಕೊನೆಯ ದಿನ ನಡೆದ ಕುಸ್ತಿ ಪಂದ್ಯಾವಳಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದರೆ, ಕೈ ಕಲ್ಲು ಎತ್ತುವ ಸ್ಪರ್ಧೆ ನೋಡುಗರ ಮೈ ನವಿರೇಳಿಸಿತು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕಿ ಶಮಿತಾ ತಮ್ಮ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು.
Advertisement
Advertisement
ಕಾರ ಹುಣ್ಣಿಮೆ ಹಿನ್ನೆಲೆ ರಾಯಚೂರಿನಲ್ಲಿ ಜೂನ್ 16 ರಿಂದ 18 ರ ವರೆಗೆ ನಡೆದ ವಿವಿಧ ಸ್ಪರ್ಧೆಗಳು ಕಲಾ ಪ್ರದರ್ಶಗಳು ಮುಕ್ತಾಯಗೊಂಡಿವೆ. ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಹಬ್ಬದಲ್ಲಿ ಕೊನೆಯ ದಿನ ನಡೆಯುವ ಕುಸ್ತಿ ಪಂದ್ಯ ಹಾಗೂ ಕಲ್ಲು ಎತ್ತುವ ಸ್ಪರ್ಧೆ ಈ ಬಾರಿಯೂ ನೋಡುಗರನ್ನು ಮೈನವಿರೇಳುವಂತೆ ಮಾಡಿದವು. ರಾಜ್ಯ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಬಂದಿದ್ದ ಸ್ಪರ್ಧಿಗಳು ಹಾಗೂ ರೈತರು ಮುಂಗಾರು ಹಬ್ಬಕ್ಕೆ ಮೆರಗು ನೀಡಿದರು.
Advertisement
ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ರೋಚಕ ಸ್ಪರ್ಧೆ ಉಂಟುಮಾಡಿತ್ತು. ಇಲ್ಲಿನ ರಾಜೇಂದ್ರ ಗಂಜ್‍ನಲ್ಲಿ ನೆರೆದಿದ್ದ ಸಾವಿರಾರು ಜನ ಕುಸ್ತಿ ಪಟುಗಳ ಪಟ್ಟುಗಳಿಗೆ ರೋಮಾಂಚನಗೊಂಡರು. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಯಲ್ಲಿ ಗೆದ್ದ ಕುಸ್ತಿ ಪಟು ಹಾಗೂ ಸೋತ ಪಟುವಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
Advertisement
ಒಂದೆಡೆ ಕುಸ್ತಿ ಪಂದ್ಯ ನೋಡುಗರ ಮೈ ನವಿರೇಳಿಸಿದರೆ, ಇನ್ನೊಂದೆಡೆ ಗುಂಡು ಕೈ ಕಲ್ಲು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆ ನೆರೆದಿದ್ದವರನ್ನು ಮಂತ್ರ ಮುಗ್ಧರನ್ನಾಗಿಸಿತು. 20 ಕೆ.ಜಿ.ಯಿಂದ ನೂರು ಕೆ.ಜಿ ಕಲ್ಲನ್ನು ಒಂದೇ ಕೈಯಲ್ಲಿ ಎತ್ತುವ ಸ್ಪರ್ಧೆಯನ್ನಂತೂ ಜನ ಒಂದೇ ಉಸಿರಲ್ಲಿ ನೋಡಿ ಬೆಕ್ಕಸ ಬೆರಗಾದರು.
ಒಟ್ಟಿನಲ್ಲಿ ಎತ್ತುಗಳ ಭಾರದ ಕಲ್ಲನ್ನು ಎಳೆಯುವ ಸ್ಪರ್ಧೆಯಿಂದ ಹಿಡಿದು ಕುಸ್ತಿ ಪಂದ್ಯಾವಳಿವರೆಗೆ ಮುಂಗಾರು ಹಬ್ಬ ಜಾನಪದ ಕ್ರೀಡೆಗಳಿಗೆ ಉಸಿರು ನೀಡಿದೆ. ಇನ್ನೂ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಸಾವಿರಾರು ಜನ ಕುತೂಹಲದಿಂದಲೇ ಮುಂಗಾರು ಹಬ್ಬದ ಸವಿಯನ್ನು ಸವಿದರು.