ರಾಯಚೂರು: ಮದುವೆ ಫೋಟೋ ಶೂಟ್ ನಲ್ಲಿ ಹಲವರು ವಿಭಿನ್ನತೆ ಮೆರೆಯುವುದನ್ನು ನೋಡಿದ್ದೇವೆ. ಆದರೆ ರಾಯಚೂರಿನ ಈ ಜೋಡಿ ವಿಭಿನ್ನತೆಯಲ್ಲೇ ಸಾಮಾಜಿಕ ಕಾಳಜಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕಿನ ಹಂಚಿನಾಳ (ಯು) ಗ್ರಾಮದ ಶಶಿ ಹಿರೇಮಠ ಹಾಗೂ ವಿಜಯಲಕ್ಷ್ಮಿ ದಂಪತಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಊರಿನ ಹದೆಗೆಟ್ಟ ರಸ್ತೆ ಮೇಲೆ ಹರಿಯುತ್ತಿದ್ದ ಚರಂಡಿ ನೀರು, ಡಾಂಬರ್ ಕಿತ್ತು ಹೋಗಿರುವ ರಸ್ತೆಯ ಮಧ್ಯೆ ನಿಂತು ಮದುವೆಯ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ರಸ್ತೆ ಡಾಂಬರೀಕರಣ ಮಾಡಿ ಎರಡೇ ತಿಂಗಳಲ್ಲಿ ಹದಗೆಟ್ಟಿರುವುದು ಈ ಜೋಡಿಯ ಆಕ್ರೋಶಕ್ಕೆ ಕಾರಣವಾಗಿದೆ. ಮೆರನಾಳ ಗ್ರಾಮದಿಂದ ಹಂಚಿನಾಳ (ಯು) ತನಕ ನಿರ್ಮಿಸಿರುವ ರಸ್ತೆಯನ್ನು ಸರಿಪಡಿಸಲು ಈ ಜೋಡಿ ಫೋಟೋ ಶೂಟ್ ಮೂಲಕ ಆಗ್ರಹಿಸಿದೆ. ಇದನ್ನು ಓದಿ: ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್
Advertisement
Advertisement
ಹಂಚಿನಾಳ ಮುಖ್ಯ ರಸ್ತೆಯನ್ನು 2008 ರಲ್ಲಿ ನಿರ್ಮಾಣ ಮಾಡಲಾಗಿದ್ದು, ರಸ್ತೆ ಸಂಪೂರ್ಣ ಹದೆಗೆಟ್ಟು ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಷ್ಟೇ ಬಾರಿ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಜನ ಪ್ರತಿನಿಧಿಗಳು ಅಧಿಕಾರಿಗಳ ಗಮನ ಸೆಳೆಯಲು ನವ ಜೋಡಿ ಈ ರೀತಿ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿದೆ. ಮದುವೆ ಫೋಟೋ ಶೂಟ್ ನ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಇದು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ ತೆರೆಸಬೇಕಿದೆ.