ರಾಯಚೂರು ನಗರಸಭೆ ಕಲುಷಿತ ನೀರಿನಿಂದ ಸರಣಿ ಸಾವು – ಘೋಷಣೆಗೆ ಸೀಮಿತವಾದ ಪರಿಹಾರ

Public TV
2 Min Read
RCR WATER 4

ರಾಯಚೂರು: ನಗರಸಭೆ ಕಲುಷಿತ ನೀರು ಕುಡಿದು ಐದು ಜನ ಸಾವನ್ನಪ್ಪಿದರು ಇಲ್ಲಿನ ಅಧಿಕಾರಿಗಳು ಶುದ್ದ ಕುಡಿಯುವ ನೀರು ಕೊಡುತ್ತಿಲ್ಲ. ಜವಾಬ್ದಾರಿ ಮರೆತು ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯಿರಿ ಎನ್ನುತ್ತಿದ್ದಾರೆ. ಇನ್ನೊಂದೆಡೆ ತಾವೇ ಘೋಷಣೆ ಮಾಡಿದ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನೂ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

RCR SHIVARAJ PATIL 3

ಕಲುಷಿತ ನೀರು ಹರಿಸಿ ಬಡ ಜನರನ್ನು ಆಸ್ಪತ್ರೆ ಸೇರುವಂತೆ ಮಾಡಿರುವ ನಗರಸಭೆ. ಕೂಲಿ ಮಾಡಿ ಬದುಕುವ ಜನ ಸಾವಿರಾರು ರೂಪಾಯಿ ಖರ್ಚು ಮಾಡಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಿಎಂ ಘೋಷಿಸಿದ ಪರಿಹಾರವೂ ಬಂದಿಲ್ಲ. ಹೀಗಾಗಿ ನಗರದ ಜನತೆ ನಗರಸಭೆ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ನಿರ್ಲಕ್ಷ್ಯ ಕುರಿತು ಮಾಧ್ಯಮಗಳು ಎಷ್ಟೇ ವರದಿ ಮಾಡಿದರೂ ದಪ್ಪ ಚರ್ಮದ ಅಧಿಕಾರಿಗಳು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ. ತನಿಖಾ ಸಮಿತಿ ನಗರದ ತುಂಬಾ ಓಡಾಡಿ, ಪರಿಶೀಲನೆ ಸಭೆ ಮಾಡಿ ಹೋದರು ಅಂತಹ ಎಫೆಕ್ಟ್ ಏನೂ ಆಗಿಲ್ಲ. ರಾಂಪೂರ ಜಲ ಶುದ್ಧೀಕರಣ ಘಟಕದಲ್ಲಿ ಹಲ್ಲಿ ಬಿದ್ದಿರುವುದು ನೋಡಿದ್ರೆ ನಗರಸಭೆ ಸಿಬ್ಬಂದಿ ಎಷ್ಟು ಅಲರ್ಟ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇದೆಲ್ಲಾ ಒಂದುಕಡೆಯಾದ್ರೆ ಏನೋ ಕ್ರಮ ತೆಗೆದುಕೊಂಡಿದ್ದೇವೆ ಅನ್ನೋ ಹಾಗೇ ನಗರಸಭೆ ಸದಸ್ಯರು ದಿಢೀರ್ ತುರ್ತು ಸಭೆ ನಡೆಸಿ ಕಲುಷಿತ ನೀರು ಕುಡಿದು ಸಾವನ್ನಪ್ಪಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸಾ ವೆಚ್ಚ 20 ಸಾವಿರ ರೂಪಾಯಿ ಕೊಡುವುದಾಗಿ ನಿರ್ಧಾರ ಮಾಡಿ ಘೋಷಿಸಿದ್ದು ಘೋಷಣೆಯಾಗೇ ಉಳಿದಿದೆ. ಇದುವರೆಗೂ ಯಾರಿಗೂ ಬಿಡಿಗಾಸು ಕೊಟ್ಟಿಲ್ಲ. ಸಿಎಂ ಘೋಷಿಸಿದ ಐದು ಲಕ್ಷ ರೂಪಾಯಿ ಪರಿಹಾರವೂ ಬಂದಿಲ್ಲ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

RAICHUR WATER 2 2

ಇದುವರೆಗೆ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಮಲ್ಲಮ್ಮ, ಅಬ್ದುಲ್ ಗಫರ್, ನೂರ್ ಮೊಹಮ್ಮದ್, ಅಬ್ದುಲ್ ಕರೀಂ, ಜನಕರಾಜ ಇವರಲ್ಲಿ ಯಾರೂ ಆರ್ಥಿಕವಾಗಿ ಸ್ಥಿತಿವಂತರಲ್ಲ. ಆಟೋ ಚಾಲಕ, ಎಲೆಕ್ಟ್ರಿಷಿಯನ್, ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದವರು. ಆದ್ರೆ ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿರಾನಗರ, ಅಂದ್ರೂನ್ ಕಿಲ್ಲಾ, ಅರಬ್ ಮೊಹಲ್ಲಾದಲ್ಲಿನ ಜನ ಆಸ್ಪತ್ರೆಗೆ ದಾಖಲಾಗಿ ಇತ್ತ ಕೂಲಿಯೂ ಇಲ್ಲ, ಅತ್ತ ನಗರಸಭೆ ಘೋಷಿಸಿದ ಪರಿಹಾರವೂ ಇಲ್ಲದೆ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಖರ್ಚುಮಾಡುತ್ತಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಸಾವು ಪ್ರಕರಣ – ಮೃತರ ಕುಟುಂಬಕ್ಕೆ ನಗರಸಭೆಯಿಂದ ತಲಾ 10 ಲಕ್ಷ ರೂ. ಪರಿಹಾರ

RAICHUR WATER 4

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇನೋ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಅಂತಾರೆ. ಆದ್ರೆ ರಾಯಚೂರಿನಲ್ಲಿ ಐದು ಸಾವಾದರೂ ಅಧಿಕಾರಿಗಳು ಮಾತ್ರ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ. ಶುದ್ದ ಕುಡಿಯುವ ನೀರು ಇಲ್ಲ, ಘೋಷಣೆಯಾದ ಪರಿಹಾರವೂ ಇಲ್ಲ ಎಂಬಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *