ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಸಾವಿನ ಪ್ರಕರಣ ಮಾಸುವ ಮುನ್ನವೇ, ನಗರದ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಅಪ್ರಾಪ್ತೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
17 ವರ್ಷದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಐದು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾಳೆ. ಕಾಲೇಜು ತರಗತಿಗಳು ಆರಂಭವಾಗದಿದ್ದರೂ ಪ್ಯಾರಾ ಮಡಿಕಲ್ ವಿದ್ಯಾರ್ಥಿನಿ ಆಗಸ್ಟ್ 16 ರಂದು ಗಣಮೂರು ಗ್ರಾಮದಿಂದ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ.
Advertisement
ರಾಯಚೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಳು. ಇದರಿಂದ ಗಾಬರಿಯಾದ ಪೋಷಕರು ಆಗಸ್ಟ್ 17 ರಂದು ರಾಯಚೂರು ಮಹಿಳಾ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆದರೆ ಆಗಸ್ಟ್ 20 ರಂದು ಆಂಧ್ರದ ಕರ್ನೂಲ್‍ನ ಗುಡೂರು ಠಾಣಾ ವ್ಯಾಪ್ತಿಯ ಸುಂಕೇಶ್ವರ ಜಲಾಶಯ ಬಳಿ ತುಂಗಭದ್ರ ನದಿಯಲ್ಲಿ ಶವ ಪತ್ತೆಯಾಗಿದ್ದಾಳೆ.
Advertisement
Advertisement
ಪೋಷಕರ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ಆಟೋ ಚಾಲಕ ವೀರೇಂದ್ರ ಎಂಬವನನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿದ್ಯಾರ್ಥಿನಿ ಸಾವಿನ ತನಿಖೆಯನ್ನ ಮುಂದುವರಿಸಿದ್ದಾರೆ.
Advertisement
ವಿದ್ಯಾರ್ಥಿನಿ ಪೋಷಕರು 17ರಂದು ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ತನಿಖೆ ಮಾಡಿದ್ದೆವು. ಆದರೆ ದುರದೃಷ್ಟವಶಾತ್ ವಿದ್ಯಾರ್ಥಿನಿ ಶವ ಆಂಧ್ರ ಪ್ರದೇಶದ ಸುಂಕೇಶ್ವರ ಜಲಾಶಯ ಬಳಿ ಪತ್ತೆಯಾಗಿದೆ. ನಮ್ಮ ಇಲಾಖೆ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಅವರ ಪೋಷಕರು ಅನುಮಾನ ವ್ಯಕ್ತಪಡಿಸಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.