ರಾಯಚೂರು: ನಗರದಲ್ಲಿ ಆಯೋಜಿಸಲಾದ ಚಿತ್ರಸಂತೆಯಲ್ಲಿನ ವಿವಿಧ ಬಗೆಯ ಕಲಾಕೃತಿಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಕಲಾಸಂಕುಲ ಸಂಸ್ಥೆ ವತಿಯಿಂದ ಎರಡನೇ ಬಾರಿಗೆ ರಾಯಚೂರಿನಲ್ಲಿ ಚಿತ್ರಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಸಾರ್ವಜನಿಕ ಉದ್ಯಾನವನದ ಮುಂಭಾಗ ಸ್ಟೇಷನ್ ರಸ್ತೆಪಕ್ಕದಲ್ಲಿ ಹಮ್ಮಿಕೊಂಡಿರುವ ಚಿತ್ರಸಂತೆಯಲ್ಲಿ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಕಲಾವಿದರು ಭಾಗಿಯಾಗಿದ್ದರು. ಜಿಲ್ಲೆಯ ಹಿರಿಯ ಕಲಾವಿದರಾದ ದಿವಂಗತ ಶಂಕರಗೌಡ ಬೆಟ್ಟದೂರು ಅವರ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜಾ ಅಮರೇಶ್ವರ ನಾಯಕ್ ಉದ್ಘಾಟನೆ ಮಾಡಿದರು.
ಚಿತ್ರ ಕಲಾವಿದರಿಗಾಗಿ 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ನೋಡುಗರ ಕಣ್ಮನ ಸೆಳೆಯುತ್ತಿರುವ ಚಿತ್ರಸಂತೆಯಲ್ಲಿನ ಚಿತ್ರಗಳನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸಿದರು. ಹಿರಿಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರೂ ಮುಖಕ್ಕೆ ಚಿತ್ರಗಳನ್ನು ಬಿಡಿಸಿಕೊಳ್ಳುವ ಮೂಲಕ ಹಾಗೂ ಸ್ಥಳದಲ್ಲೇ ತಮ್ಮ ಭಾವಚಿತ್ರಗಳನ್ನೂ ಬಿಡಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದರು. ವಿವಿಧ ಕಲಾವಿದರ ನೂರಾರು ಕಲಾಕೃತಿಗಳು ಆಕರ್ಷಣೀಯವಾಗಿದ್ದವು.