ರಾಯಚೂರು: ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯ ಬಿರು ಬೇಸಿಗೆ ಹಿನ್ನೆಲೆ ಮತ ಎಣಿಕೆ ಕೊಠಡಿಗಳಲ್ಲಿ ವಿಶೇಷವಾಗಿ 40 ಕ್ಕೂ ಹೆಚ್ಚು ಏರ್ ಕೂಲರ್ ಹಾಗು ಎಸಿ ವ್ಯವಸ್ಥೆ ಮಾಡಲಾಗಿದೆ.
43 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಗರಿಷ್ಠ ತಾಪಮಾನ ದಾಖಲಾಗುತ್ತಿರುವುದರಿಂದ ಮತ ಎಣಿಕೆ ಸಿಬ್ಬಂದಿಗೆ ಸಮಸ್ಯೆಯಾಗದಿರಲಿ ಅಂತ ಏರ್ ಕೂಲರ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಎಸ್‍ಆರ್ ಪಿಎಸ್ ಹಾಗೂ ಎಲ್‍ವಿಡಿ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ 9 ಕೊಠಡಿಗಳನ್ನ ಕಾಯ್ದಿರಿಸಲಾಗಿದೆ.
Advertisement
Advertisement
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನ ಇಡಲಾಗಿದ್ದು, ಮತ ಎಣಿಕೆಗೆ ಒಟ್ಟು 112 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಅಂದಾಜು 23 ಸುತ್ತು ಮತ ಎಣಿಕೆ ನಡೆಯಲಿದ್ದು, ಅಂಚೆ ಮತಗಳ ಎಣಿಕೆಗಾಗಿ ಪ್ರತ್ಯೇಕ ನಾಲ್ಕು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ 352 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಒಟ್ಟು 181 ಮೈಕ್ರೋ ಅಬ್ಸರ್ವರ್ ಗಳನ್ನ ನೇಮಕ ಮಾಡಲಾಗಿದೆ. ಅಲ್ಲದೇ ಮೂರು ಜನ ಅಧಿಕಾರಿಗಳು ಚುನಾವಣಾ ವೀಕ್ಷಕರಿರಲಿದ್ದಾರೆ.
Advertisement
Advertisement
ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿದೆ. ಭದ್ರತೆಗಾಗಿ ಒಟ್ಟು 500 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೂರು ಸಿಆರ್ ಪಿಎಫ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕ್ಷೇತ್ರದ ಒಟ್ಟು 19,27,758 ಮತದಾರರಲ್ಲಿ 11,15,886 ಮತದಾರರು ಮತ ಚಲಾಯಿಸಿದ್ದು, ಶೇಕಡಾ 58.91% ಮತದಾನವಾಗಿದೆ. ಕಣದಲ್ಲಿ ಮೈತ್ರಿ ಪಕ್ಷಗಳ ಬಿವಿ ನಾಯಕ್ ಹಾಗು ಬಿಜೆಪಿಯ ಅಮರೇಶ್ವರ ನಾಯಕ್ ಸೇರಿದಂತೆ ಒಟ್ಟು 5 ಜನ ಅಭ್ಯರ್ಥಿಗಳಿದ್ದಾರೆ.