ರಾಯಚೂರು: ಕಳೆದ ಹದಿನೈದು ದಿನಗಳ ಹಿಂದಷ್ಟೆ ಈರುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ಈರುಳ್ಳಿ ಬೆಳೆಗಾರರು ಖುಷಿ ಪಟ್ಟಿದ್ದರು. ಆದರೆ ಈಗ ಬೆಲೆ ಪಾತಾಳ ಕಂಡಿದೆ. ಜೊತೆಗೆ ರಾಯಚೂರಿನಲ್ಲಿ ಸುರಿದ ಮಳೆ ಇಲ್ಲಿನ ಈರುಳ್ಳಿ ಬೆಳೆಗಾರರನ್ನ ಬೀದಿಪಾಲು ಮಾಡಿದೆ.
6 ರಿಂದ 7 ಸಾವಿರ ರೂಪಾಯಿಗೆ ಕ್ವಿಂಟಾಲ್ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದಿದೆ. 1 ಸಾವಿರದಿಂದ 1,500 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಹೋಗುತ್ತಿದೆ. ಇದರಿಂದ ಅತಿವೃಷ್ಠಿ, ಅನಾವೃಷ್ಠಿ ಮಧ್ಯೆಯೂ ಎಷ್ಟೋ ಖುಷಿಖುಷಿಯಾಗಿದ್ದ ರಾಯಚೂರಿನ ಈರುಳ್ಳಿ ಬೆಳೆಗಾರರ ಖುಷಿ ಕರಗಿಹೋಗಿದೆ. ಅಲ್ಲದೆ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೀರು ನುಗ್ಗಿ ರೈತರ ಈರುಳ್ಳಿ ಹಾಳಾಗಿ ಹೋಗಿದೆ.
Advertisement
Advertisement
ಮಾರುಕಟ್ಟೆಯಲ್ಲಿನ ಕೆಟ್ಟ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ಹಾಗೂ ಚರಂಡಿ ನೀರು ಈರುಳ್ಳಿಯನ್ನ ಹಾಳು ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಹಾಳಾಗಿ ಹೋಗಿದೆ. ಇನ್ನೊಂದೆಡೆ ಬೆಲೆ ಕುಸಿದಿರುವುದು ಬೆಳೆಗಾರರ ಬದುಕನ್ನ ಬೀದಿಗೆ ತಂದಿದೆ. ನಾಲ್ಕು ದಿನಗಳಿಂದ ಈರುಳ್ಳಿ ಮಾರಲು ಮಾರುಕಟ್ಟೆಯಲ್ಲೇ ಉಳಿದಿದ್ದ ಲಿಂಗಸುಗೂರಿನ ಈರುಳ್ಳಿ ಬೆಳೆಗಾರ ನದೀಮ್‍ಖಾನ್ ನಮ್ಮ ಕಷ್ಟ ಯಾರಿಗೂ ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.
Advertisement
ಆಂಧ್ರಪ್ರದೇಶ ,ತೆಲಂಗಾಣ ಗಡಿ ಭಾಗದಲ್ಲೇ ರಾಯಚೂರು ಮಾರುಕಟ್ಟೆ ದೊಡ್ಡದಾಗಿರುವುದರಿಂದ ರಾಯಚೂರು ರಾಜೇಂದ್ರ ಗಂಜ್ ಗೆ ನಾನಾ ಕಡೆಯಿಂದ ಬಂದ ರೈತರು ತಮ್ಮ ಈರುಳ್ಳಿ ಮಾರಾಟ ಮಾಡಲು ನಾಲ್ಕೈದು ದಿನಗಳಿಂದ ಇಲ್ಲೇ ಉಳಿದುಕೊಂಡಿದ್ದರು. ಒಂದೆಡೆ ಬೆಲೆ ಕುಸಿಯಿತು, ಇನ್ನೊಂದೆಡೆ ಮಳೆ ಬಂದು ಕೊಚ್ಚಿಕೊಂಡು ಹೋಯಿತು. ಈ ಎಪಿಎಂಸಿ ಆವರಣದಲ್ಲಿನ ತಗಡಿನ ಶೀಟ್ ಗಳಲ್ಲಿನ ರಂಧ್ರಗಳಿಂದ ನೀರು ಸುರಿದು ಈರುಳ್ಳಿ ಹಾಳಾಗಿದೆ. ರೈತರ ಗೋಳು ಮಾತ್ರ ಕೇಳುವವರು ಯಾರೂ ಇಲ್ಲದಂತಾಗಿದೆ.
Advertisement
ಒಟ್ಟಿನಲ್ಲಿ ಗಾಯದ ಮೇಲೆ ಬರೆ ಎಳೆದ ಹಾಗೇ ಆಗಿದೆ ಈರುಳ್ಳಿ ಬೆಳೆಗಾರರ ಕತೆ. ಮಳೆಯಿಂದ ಹಾಳಾದ ಬೆಳೆಗೆ ಪರಿಹಾರ ನೀಡಬೇಕಿದೆ. ಜೊತೆಗೆ ವೈಜ್ಞಾನಿಕ ಬೆಲೆ ಮೂಲಕ ರೈತರ ಈರುಳ್ಳಿಯನ್ನ ಖರೀದಿಸಲು ಸರ್ಕಾರ ಮುಂದಾಗಬೇಕಿದೆ.