ರಾಯಚೂರು: ದಿನೇ ದಿನೇ ಈರುಳ್ಳಿ ಬೆಲೆ ಇಳಿಕೆಯಿಂದಾಗಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಜೆ ವೇಳೆಗೆ ದಿಢೀರ್ ಈರುಳ್ಳಿ ಖರೀದಿ ಸ್ಥಗಿತಗೊಳಿಸಲಾಯಿತು. ಇದರಿಂದ ಆಕ್ರೋಶಗೊಂಡ ರೈತರು ಈರುಳ್ಳಿ ಖರೀದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿ ಕ್ವಿಂಟಾಲ್‍ಗೆ 15 ಸಾವಿರ ರೂ. ಇದ್ದ ಈರುಳ್ಳಿ ದರ ಈಗ 5 ಸಾವಿರ ರೂಪಾಯಿವರೆಗೆ ಇಳಿದಿದೆ. ಹೀಗಾಗಿ ಖರೀದಿದಾರರು ಈರುಳ್ಳಿ ಖರೀದಿಯನ್ನು ಏಕಾಏಕಿ ಸ್ಥಗಿತಗೊಳಿಸಿದರು. ಇದರಿಂದ ಆತಂಕಕ್ಕೊಳಗಾದ ಈರುಳ್ಳಿ ಬೆಳೆಗಾರರು ಎಪಿಎಂಸಿ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ಮಾಡಿದರು.
Advertisement
Advertisement
ರೈತರ ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ರಾಯಚೂರು ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ, ಎಪಿಎಂಸಿ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿದರು. ರೈತರು ತಾವು ತಂದಿರುವ ಎಲ್ಲಾ ಈರುಳ್ಳಿ ಖರೀದಿ ಮಾಡುವಂತೆ ಆಗ್ರಹಿಸಿದರು. ಕೊನೆಗೆ ಬುಧವಾರದಿಂದ ಖರೀದಿ ಮುಂದುವರಿಸುವುದಾಗಿ ಎಪಿಎಂಸಿ ಅಧಿಕಾರಿಗಳು ಹಾಗೂ ಖರೀದಿದಾರರು ಒಪ್ಪಿಕೊಂಡಿದ್ದರಿಂದ ರೈತರು ಹೋರಾಟ ಹಿಂಪಡೆದಿದ್ದಾರೆ.