– ಕೊರೊನಾ ಭೀತಿ ಮಧ್ಯೆ ಕೃಷಿ ಉತ್ಪನ್ನ ಮಾರಾಟ
ರಾಯಚೂರು: ಈಗ ಕೃಷಿ ಚಟುವಟಿಕೆಗಳು ಗರಿಗೆದರುವ ಸಮಯವಾಗಿರುವುದರಿಂದ ರಾಯಚೂರು ಜಿಲ್ಲಾಡಳಿತ ಲಾಕ್‍ಡೌನ್‍ನಲ್ಲಿ ಸ್ವಲ್ಪ ಸಡಲಿಕೆ ನೀಡಿದೆ. ಸರ್ಕಾರದ ಸೂಚನೆಯಂತೆ ಕೃಷಿ ಮಾರುಕಟ್ಟೆಗಳು ಸಹ ವ್ಯಾಪಾರ ಆರಂಭಿಸಿವೆ. ಆದರೆ ಎಪಿಎಂಸಿಗಳಲ್ಲಿ ಜನ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುತ್ತಿಲ್ಲ. ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ಜಾತ್ರೆಯಂತಾಗಿದೆ.
ರೈತರ ಸಂಖ್ಯೆ ಹೆಚ್ಚಾಗಿದ್ದರಿಂದ ತುಂಬಾ ಜನ ವ್ಯಾಪಾರಿಗಳು, ದಲ್ಲಾಳಿಗಳು ತಮ್ಮ ಅಂಗಡಿಗಳನ್ನೇ ತೆರೆಯುತ್ತಿಲ್ಲ. ರೈತರು, ಹಮಾಲಿಗಳು ಗುಂಪುಗುಂಪಾಗಿ ಬರುತ್ತಿರುವುದರಿಂದ ಸಾಮಾಜಿಕ ಅಂತರ ಎನ್ನುವುದೇ ಕಾಣುತ್ತಿಲ್ಲ. ಭತ್ತ, ಈರುಳ್ಳಿ, ಶೇಂಗಾ ಬೆಳೆದ ರೈತರು ವ್ಯಾಪಾರಕ್ಕಾಗಿ ಗುಂಪುಗುಂಪಾಗೆ ಓಡಾಡುತ್ತಿದ್ದಾರೆ.
Advertisement
Advertisement
ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿರುವುದರಿಂದ ಅಂತರರಾಜ್ಯದಿಂದ ಭತ್ತ, ಈರುಳ್ಳಿ ಬರುತ್ತಿದೆ. ಆಂಧ್ರ ಪ್ರದೇಶದಿಂದಲೇ ಶೇ.70ರಷ್ಟು ಭತ್ತ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಹೊರ ರಾಜ್ಯದಿಂದ ಬರುವ ರೈತರು ಸಹ ಯಾವುದೇ ಸುರಕ್ಷತೆ ಕಾಪಾಡಿಕೊಳ್ಳುತ್ತಿಲ್ಲ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಆತಂಕವಾಗಿದೆ.
Advertisement
ಜಿಲ್ಲೆಯ ರೈತರು ಈರುಳ್ಳಿ, ಶೇಂಗಾ ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ರೈತರಿಗೂ ಯಾವುದೇ ಸುರಕ್ಷತೆ ಇಲ್ಲಾ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ವ್ಯಾಪಾರ ಆರಂಭಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಸುರಕ್ಷಿತ ಕ್ರಮಗಳೊಂದಿಗೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡಲು ಅನುವುಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.