ರಾಯಚೂರು: ಅಂಗನವಾಡಿ ಶಿಕ್ಷಕಿ ಹುದ್ದೆಗೆ ಅಕ್ರಮ ನೇಮಕಾತಿ ಮಾಡುವ ಮೂಲಕ ನನಗೆ ಅನ್ಯಾಯವಾಗಿದೆ ಅಂತ ರಾಯಚೂರಿನಲ್ಲಿ ವಿಕಲಚೇತನ ಮಹಿಳೆ ಒಂಟಿ ಹೋರಾಟ ನಡೆಸಿದ್ದಾರೆ.
ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ಹಂಪಮ್ಮ ಹುಟ್ಟುತ್ತಲೇ ಅಂಗವೈಕಲ್ಯ ಹೊಂದಿದ್ದರು. ಬೆಳವಣಿಗೆ ಇಲ್ಲದೆ ಈಗಲೂ ಕುಳ್ಳಗೆ ಇದ್ದಾರೆ. ಆದರೆ ವಿಷಯ ಅದೊಂದೇ ಅಲ್ಲಾ. ಅಂಗನವಾಡಿ ಶಿಕ್ಷಕಿ ಹುದ್ದೆಗೆ ನೇಮಕಾತಿ ಮಾಡಬೇಕಾದರೆ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು. ಆದರೆ ಸ್ಥಳೀಯರಲ್ಲದವರನ್ನು ನಕಲಿ ದಾಖಲೆಗಳ ಮೂಲಕ ಆಯ್ಕೆ ಮಾಡಿ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಹಂಪಮ್ಮ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.
Advertisement
Advertisement
ಮಸ್ಕಿ ತಾಲೂಕಿನ ಹಿರೆದಿನ್ನಿ ಗ್ರಾಮದ ಸುಧಾಕಲಾ ಎಂಬುವವರನ್ನು ಗೋರ್ಕಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ನೇಮಕ ಮಾಡಲಾಗಿದೆ. ಆದರೆ ತವರು ಮನೆ, ಗಂಡನ ಮನೆ ಎರಡೂ ಹಿರೆದಿನ್ನಿ ಆಗಿದ್ದರು, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಎಲ್ಲವೂ ಹಿರೆದಿನ್ನಿ ವಿಳಾಸದಲ್ಲಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ಕೊಟ್ಟು ವಂಚನೆ ಮಾಡಿದ್ದಾರೆ. ಸುಳ್ಳು ದಾಖಲೆಗಳ ಮೂಲಕ ಶಿಕ್ಷಕಿಯಾಗಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧಾಕಲಾರನ್ನು ಬೇರೆಡೆ ವರ್ಗಾವಣೆ ಮಾಡಿ ಸ್ಥಳೀಯಳಾದ ನನಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವಿವಾಹಿತ ಮಹಿಳೆ ಹಂಪಮ್ಮ ಮನವಿ ಮಾಡಿದ್ದಾರೆ.
Advertisement
ಶಿಶುಅಭಿವೃದ್ಧಿ ಯೋಜನೆ ಅಧಿಕಾರಿಗಳು ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ನಾನೂ ಅರ್ಜಿ ಸಲ್ಲಿಸಿದ್ದು, ಸ್ಥಳೀಯಳಾಗಿ ನಾನು ಎಲ್ಲಾ ಅರ್ಹತೆ ಹೊಂದಿದ್ದರೂ ಬೇರೆ ಗ್ರಾಮದವರಿಗೆ ಮನ್ನಣೆ ನೀಡಿರುವುದು ಅಕ್ರಮ ಎಂದು ಹಂಪಮ್ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.