– ಹೆಚ್. ವಿಶ್ವನಾಥ್ ಹೇಳಿಕೆಗೆ ಸಿಎಂ ತಿರುಗೇಟು
ರಾಯಚೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಯ ಕೊಟ್ಟರೆ ಇಂದು ರಾತ್ರಿಯೇ ಅವರನ್ನ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಅಂತಿಮ ಮಾಡುತ್ತೇನೆ. ಸಾಧ್ಯವಾದರೆ ಇಂದೇ ದೆಹಲಿಗೆ ಹೋಗುತ್ತೇನೆ. ನಾನು ವಿದೇಶಕ್ಕೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಇದೆ. ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದಾರೆ. ಇಂದು ಆಗದಿದ್ದರೂ 2-3 ದಿನದಲ್ಲಿ ಅಂತಿಮವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಯಚೂರಿನ ದೇವದುರ್ಗದ ತಿಂಥಣಿ ಬ್ರಿಡ್ಜ್ ಬಳಿಯ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಹಾಲುಮತ ಕೇಂದ್ರದಲ್ಲಿ ಆಯೋಜಿಸಲಾದ ಹಾಲುಮತ ಸಂಸ್ಕೃತಿ ವೈಭವ 2020 ಕಾರ್ಯಕ್ರಮಕ್ಕೆ ಆಗಮಿಸಿ ಸಿಎಂ ಮಾತನಾಡಿದರು. ಭಾನುವಾರ ರಾತ್ರಿ ದೆಹಲಿಗೆ ಹೋಗಬೇಕಿತ್ತು. ಆದರೆ ದೇವದುರ್ಗದ ಕಾರ್ಯಕ್ರಮ ನಿಮಿತ್ತ ಇಂದು ದೆಹಲಿಗೆ ಹೋಗುತ್ತಿದ್ದೇನೆ. ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ಅಂತಿಮವಾಗುತ್ತದೆ ಎಂದರು.
Advertisement
Advertisement
ಇದೇ ಸಂದರ್ಭದಲ್ಲಿ 17 ಜನರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಯಾರೋ ಹೇಳಿದರು ಅಂತ ಎಲ್ಲರಿಗೂ ಸಚಿವ ಸ್ಥಾನ ಕೊಡಲು ಆಗಲ್ಲ. ಪಕ್ಷದ ವರಿಷ್ಠರು ಸಚಿವ ಸ್ಥಾನದ ಬಗ್ಗೆ ತೀರ್ಮಾನ ಮಾಡುತ್ತಾರೆ ಅಂತ ತಿಳಿಸಿದರು.
Advertisement
ಹಾಲುಮತ ಸಂಸ್ಕೃತಿ ಉತ್ಸವದಲ್ಲಿ ಬಿಎಸ್‍ವೈ ಜೊತೆ ಮಾಜಿ ಶಾಸಕ ಹೆಚ್.ವಿಶ್ವನಾಥ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಶಿವನಗೌಡನಾಯಕ್, ಡಾ.ಶಿವರಾಜ್ ಪಾಟೀಲ್, ಸಿದ್ದರಾಮನಂದಪುರಿ ಸ್ವಾಮಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.